

ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಗಾಂಧಿ ಬಜಾರ್ನಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಬಹುಮಹಡಿ ಕಾರ್ ಪಾರ್ಕಿಂಗ್ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡು ತಿಂಗಳುಗಳೇ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಲಭಿಸಿಲ್ಲ. 22 ಕೋಟಿ ರೂ. ಯೋಜನೆ ಇದಾಗಿದ್ದು, ಒಂದು ವೇಳೆ ಸಾರ್ವಜನಿಕ ಸೇವೆಗೆ ಲಭ್ಯವಾದರೂ ವಾಣಿಜ್ಯ ವಹಿವಾಟು ಅಧಿಕ ಪ್ರಮಾಣದಲ್ಲಿರುವ ಈ ರಸ್ತೆಯಲ್ಲಿನ ಪಾರ್ಕಿಂಗ್ ಕಟ್ಟಡ ಜನೋಪಯೋಗಕ್ಕೆ ಬರುವುದು ಸಂದೇಹ ಎನ್ನುತ್ತಾರೆ ಸ್ಥಳಿಯ ವ್ಯಾಪಾರಿಗಳು.
ಕಟ್ಟಡದ ತಳಮಹಡಿ ಹಾಗೂ ನೆಲಮಹಡಿಯಲ್ಲಿ ವ್ಯಾಪಾರಕ್ಕಾಗಿ 50 ಮಳಿಗೆ ನಿರ್ಮಿಸಲಾಗಿದೆ. 1ರಿಂದ 4ನೇ ಮಹಡಿಯವರೆಗೆ ಕಾರ್ಗಳ ನಿಲುಗಡೆಗೆ ವ್ಯವಸ್ಥೆ (ಪ್ರತಿ ಮಹಡಿಯಲ್ಲಿ ತಲಾ 31 ವಾಹನ) ಇದ್ದು, 124 ವಾಹನಗಳನ್ನು ನಿಲ್ಲಿಸಬಹುದು. 1 ಲ್ಟ್ಿ, 6 ಶೌಚಗೃಹಗಳಿವೆ. ಸುಮಾರು 2 ವರ್ಷಗಳಿಂದ ಪ್ರಗತಿಯಲ್ಲಿರುವ ಕಾಮಗಾರಿ ಬಹುತೇಕ ಕೆಲಸಗಳು ಮುಗಿದಿದೆ.
ಇಲ್ಲಿ ಪಾರ್ಕಿಂಗ್ ಮಾಡೋರ್ಯಾರು?: ಗಾಂಧಿ ಬಜಾರ್ನಲ್ಲಿ ಕಿರಿದಾದ ದ್ವಿಮುಖ ರಸ್ತೆ ಇರುವುದರಿಂದ ಇಲ್ಲಿ ಸಂಚಾರ ಸಿಕ್ಕು ಮಾಮೂಲಿ. ರಸ್ತೆಯ ಇಕ್ಕೆಲಗಳಲ್ಲಿ ಇರುವ ಪಾದಚಾರಿ ಮಾರ್ಗಗಳಲ್ಲಿ ಬೀದಿಬದಿ ವ್ಯಾಪಾರಿಗಳು ಹೂ& ಹಣ್ಣು, ತರಕಾರಿ ಹಾಗೂ ಚಿಲ್ಲರೆ ವ್ಯಾಪಾರ ಮಾಡುತ್ತಿರುವುದರಿಂದ ಗ್ರಾಹಕರು ರಸ್ತೆಬದಿಯಲ್ಲೇ ವಾಹನ ನಿಲ್ಲಿಸಿ ವ್ಯವಹರಿಸುತ್ತಾರೆ. ಅಡ್ಡಾದಿಡ್ಡಿಯಾಗಿ ಜನರು ಓಡಾಡುವುದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆಯಿಂದ ವ್ಯಾಪಾರಸ್ಥರಿಗೂ, ಗ್ರಾಹಕರಿಗೂ ಅನುಕೂಲವಾಗುವಂತೆ, ಮಳಿಗೆಗಳು ಹಾಗೂ ಕಾರ್ ಪಾರ್ಕಿಂಗ್ ಸ್ಥಳದ ಯೋಜನೆ ರೂಪಿಸಲಾಗಿದೆ. ಇಲ್ಲಿ 100 ರೂ. ವಸ್ತು ಕೊಳ್ಳಲು ಬರುವವರು 50 ರೂ. ಪಾರ್ಕಿಂಗ್ಗೆ ಹಣ ಹೇಗೆ ಕೊಟ್ಟಾರು? ಮಧ್ಯಮ ವರ್ಗದವರೇ ಜಾಸ್ತಿ ಭೇಟಿ ನೀಡುವ ಈ ರಸ್ತೆಯಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಕಟ್ಟಡ ನಿರ್ಮಿಸಿದ ಜಾಗದಲ್ಲಿ ಮೊದಲು ಹೂವಿನ ಮಾರುಕಟ್ಟೆ ಇತ್ತು. ಈಗ ಹೂವಿನ ವ್ಯಾಪಾರಿಗಳೆಲ್ಲ ಬೀದಿಬದಿ ನೆಲೆಗೊಂಡಿದ್ದಾರೆ.ಹೀಗಿರುವಾಗ ಆ ವ್ಯಾಪಾರಿಗಳನ್ನು ಮತ್ತೆ ನಾಲ್ಕು ಗೋಡೆಗಳ ಮಧ್ಯೆ ತರುವುದು ಪಾಲಿಕೆಗೆ ದೊಡ್ಡ ಸವಾಲಾಗಿದೆ. ಒಟ್ಟಿನಲ್ಲಿ ಈ ಯೋಜನೆಯ ಬಗ್ಗೆ ಗ್ರಾಹಕರಲ್ಲಿ ಹಾಗೆಯೇ ವ್ಯಾಪಾರಿಗಳಲ್ಲಿ ನಕಾರಾತ್ಮಕ ಅಭಿಪ್ರಾಯ ಇದೆ. ಈ ಪ್ರದೇಶದ ಹತ್ತಿರ ವಾಸಿಸುವ, ಕಾರ್ ಪಾರ್ಕಿಂಗ್ಗೆ ಸ್ಥಳ ಇಲ್ಲದವರಿಗೆ ಬಹುಶ@ ಈ ಜಾಗ ಉಪಯೋಗಕ್ಕೆ ಬರಬಹುದು. ಒಂದೆರಡು ದಿನದ ಮಟ್ಟಿಗೆ ವಾಹನಗಳನ್ನು ಸುರತವಾಗಿ ಇರಿಸುವವರಿಗೆ ಅನುಕೂಲವಾಗಬಹುದು. ಆದರೆ ಇದರಿಂದ ಈ ಭಾಗದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವುದು ಕಷ್ಟಸಾಧ್ಯ ಎಂಬುವುದು ಜನಾಭಿಪ್ರಾಯ.
ಸುಮಾರು 70&80 ವರ್ಷದಿಂದ ವ್ಯಾಪಾರಿಗಳು ಇಲ್ಲೇ ಇದ್ದಾರೆ. ರಸ್ತೆ, ಪಾದಚಾರಿ ಮಾರ್ಗಗಳು ಅಭಿವೃದ್ಧಿಗೊಂಡಾಗಲೂ ಸಾಕಷ್ಟು ಗೊಂದಲಗಳಿದ್ದವು. ಗಾಂಧಿ ಬಜಾರ್ನ ಸಮಸ್ಯೆಗೆ ಮಾತ್ರ ಈಗಲೂ ಪರಿಹಾರ ದೊರಕಿಲ್ಲ. ರಸ್ತೆಬದಿ ನಿಲ್ಲಿಸಿದ್ದ ವಾಹನಗಳಿಗೆ ದಂಡ ವಿಧಿಸುವುದು ಇಲ್ಲಿನ ಸಾಮಾನ್ಯ ದೃಶ್ಯವಾಗಿದೆ. ಅಲ್ಲಲ್ಲಿ ಟ್ರಾಫಿಕ್ ಜಾಮ್, ಜಗಳ ನೋಡಿ ನೋಡಿ ಸಾಕಾಗಿದೆ. ಇದೀಗ ಕಾರ್ ಪಾರ್ಕಿಂಗ್ನ ಹೊಸ ಯೋಜನೆಯೂ ಹಣ ವಸೂಲಿಗಷ್ಟೇ ಸೀಮೀತವಾಗಲಿದೆ. ಆ. 15ಕ್ಕೆ ಉದ್ಘಾಟಿಸಲಾಗುವುದು ಎನ್ನುತ್ತಿದ್ದರು. ಇನ್ನೂ ಆಗಿಲ್ಲ. > ಸೋಮಶೇಖರ, ವ್ಯಾಪಾರಿ ಗಾಂಧಿ ಬಜಾರ್ನ ಸುಮಾರು ಮಳಿಗೆಗಳಲ್ಲಿ ಸ್ವಂತ ಪಾರ್ಕಿಂಗ್ ವ್ಯವಸ್ಥೆಗಳಿವೆ. ಅಲ್ಲದೆ, ನೂತನ ಬಹುಮಹಡಿ ಪಾರ್ಕಿಂಗ್ ಕಟ್ಟಡದ ವಿರುದ್ಧ ಭಾಗದಲ್ಲಿ ಪ್ರತ್ಯೇಕ ಕಾರು ಪಾರ್ಕಿಂಗ್ ಸ್ಥಳವೂ ಇದೆ. ಇಲ್ಲಿ ಸಮಸ್ಯೆ ಇರುವುದು ತಾತ್ಕಾಲಿಕವಾಗಿ ವಾಹನ ಪಾರ್ಕಿಂಗ್ ಮಾಡುವವರಿಂದ. ಕಿರಿದಾದ ರಸ್ತೆ ಹಾಗೂ ಪಾದಚಾರಿ ಮಾರ್ಗದ ಒತ್ತುವರಿಯೂ ಒಂದು ಸಮಸ್ಯೆಯಾಗಿದೆ. ಇದನ್ನು ಏಕಮುಖ ರಸ್ತೆಯಾಗಿಸಿದರೆ ವ್ಯಾಪಾರಕ್ಕೂ ಸಮಸ್ಯೆಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. > ಕೌಸಲ್ಯ, ಚಾಮರಾಜಪೇಟೆ