ಚಿಂತಾಮಣಿ: ತಾಲೂಕಿನ ಕೆಂಚಾರ‌್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಿಂಡಿಗಲ್ ಕ್ರಾಸ್ ಬಳಿ ಮಂಗಳವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿರುವ ಘಟನೆ ನಡೆದಿದೆ. ಚಾಲಕ ಸೇರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಇಬ್ಬರು ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಬೆಂಗಳೂರಿನಿಂದ ನೆರೆಯ ಆಂಧ್ರಪ್ರದೇಶದ ಗುಡಿಯಪಲ್ಲಿ ಗ್ರಾಮದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುಟುಂಬ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಮಿಂಡಿಗಲ್ ಕ್ರಾಸ್ ಬಳಿ ಅಡ್ಡಬಂದ ನಾಯಿಯನ್ನು ತಪ್ಪಿಸಲು ಹೋದಾಗ ಎದುರುಗಡೆಯಿಂದ ಮತ್ತೊಂದು ವಾಹನ ಬಂದಿದೆ. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.
ಈ ಬಗ್ಗೆ ಕೆಂಚಾರ‌್ಲಹಳ್ಳಿ ಠಾಣೆಯಲ್ಲಿ ಯಾವುದೇ ದೂರು ದಾಖಲಿಸದೆ, ವಾಹನ ಮಾಲೀಕರು ಕಾರನ್ನು ದುರಸ್ತಿಗೆ ಒಯ್ದಿದ್ದಾರೆ ಎನ್ನಲಾಗಿದೆ.
2024ರ ಜೂನ್ 28ರಂದು ಇದೇ ಜಾಗದಲ್ಲಿ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಜಾಗದಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಅಪಘಾತ ವಲಯ ಸೂಚಿಸುವ ಲಕವನ್ನು ಅಳವಡಿಸುವಂತೆ ಮಿಂಡಿಗಲ್ ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ್ ಒತ್ತಾಯಿಸಿದ್ದಾರೆ.