ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು; ಒಳಗಿದ್ದ ಮೂವರು ಪವಾಡಸದೃಶವಾಗಿ ಪಾರು

Car
Published on

ದಾವಣಗೆರೆ: ನಿಯಂತ್ರಣ ತಪ್ಪಿದ ಕಾರೊಂದು ಬುಧವಾರ ಬೆಳಗ್ಗೆ ದಾವಣಗೆರೆ ಸಮೀಪದ ಬಾತಿ ಕೆರೆಗೆ ಬಿದ್ದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ಹರಿಹರ ಕಡೆಯಿಂದ ದಾವಣಗೆರೆಯತ್ತ ಬರುತ್ತಿತ್ತು. ಬಾತಿ ಕೆರೆ ಬಳಿ ಬಂದಾಗ ನಿಯಂತ್ರಣ ತಪ್ಪಿ ನೀರಿಗೆ ಉರುಳಿತು. ಆ ಸದ್ದು ಕೇಳಿ ಸಮೀಪದಲ್ಲಿದ್ದ ಯುವಕರು ಧಾವಿಸಿ ಕಾರಲ್ಲಿದ್ದವರನ್ನು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಹರ ಬಳಿಯ ಅಮರಾವತಿ ಕಾಲನಿ ನಿವಾಸಿಗಳಾದ ಮುನೀಷ್ ಧವನ್, ಅವರ ಪತ್ನಿ ಮತ್ತು ತಾಯಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ದಾವಣಗೆರೆ ಕಡೆಗೆ ಹೊರಟಿದ್ದರು ಎಂದು ತಿಳಿದುಬಂದಿದೆ.

ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಕ್ರೇನ್ ಬಳಸಿ ಕಾರನ್ನು ಕೆರೆಯಿಂದ ಮೇಲೆತ್ತಲಾಯಿತು. ಈ ದೃಶ್ಯವನ್ನು ನೋಡಲು ಸಾರ್ವಜನಿಕರು ಸೇರಿದ್ದರು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net