

ಗದಗ: ಇಲ್ಲೊಂದು ಕುಟುಂಬಕ್ಕೆ ನೋವಿನ ಮೇಲೆ ಮತ್ತೆ ನೋವು ಎಂಬಂಥ ಪರಿಸ್ಥಿತಿ ಉಂಟಾಗಿದೆ. ಅದರಲ್ಲೂ ಈಗಾಗಲೇ ಸಾವಿನ ದುಃಖದಲ್ಲಿದ್ದ ಕುಟುಂಬಸ್ಥರಿಗೆ ಮತ್ತೊಂದು ಸಾವಿನ ಸುದ್ದಿ ಬರಸಿಡಿಲಾಗಿ ಎರಗಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಸಮೀಪ ಇಂಥದ್ದೊಂದು ದುರಂತ ಸಂಭವಿಸಿದೆ. ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ, ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಅಪಘಾತಕ್ಕೀಡಾದ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಆ ಪೈಕಿ ಒಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿದ್ದವರು ಶಿರಸಿ ಮೂಲದವರು ಎಂದು ತಿಳಿದುಬಂದಿದೆ. ಸಂಬಂಧಿಕರ ಅಂತ್ಯಸಂಸ್ಕಾರಕ್ಕಾಗಿ ಲಿಂಗಸುಗೂರಿಗೆ ತೆರಳಿದ್ದರು. ಅಲ್ಲಿಂದ ಮರಳಿ ಬರುವಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರ ಕುರಿತ ಹೆಚ್ಚಿನ ಹಾಗೂ ಖಚಿತ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.