ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ದುರ್ಮರಣ

accident
Published on

ರಾಯಚೂರು: ಧಾರವಾಡದ ಅಣ್ಣಿಗೇರಿ ಬಳಿಯ ಕೊಂಡಿಕೊಪ್ಪ ಕ್ರಾಸ್ ಬಳಿ ಬುಧವಾರ ನಸುಕಿನಲ್ಲಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಮೃತರೆಲ್ಲರೂ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ವಿಠ್ಠಲ ನಗರದ ನಿವಾಸಿಗಳು. ಸಣ್ಣ ಗಂಗಣ್ಣ (56), ಪತ್ನಿ ಗಂಗಮ್ಮ (50), ಸಹೋದರ ಈರಣ್ಣ(40), ಮಗ ಹನುಮಂತ (20) ಮೃತರು. ಮಗಳು ಲಕ್ಷ್ಮೀ (18) ಮತ್ತು ಚಾಲಕ ಈರಣ್ಣ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಂಗಣ್ಣ ಅವರಿಗೆ ಪಾರ್ಶ್ವವಾಯುಗೆ ಚಿಕಿತ್ಸೆ ಕೊಡಿಸಲೆಂದು ಕುಟುಂಬಸ್ಥರು ಕಾರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದರು.

ಅಣ್ಣಿಗೇರಿ ಬಳಿಯ ಕೊಂಡಿಕೊಪ್ಪ ಕ್ರಾಸ್ ಬಳಿ ಬುಧವಾರ ನಸುಕಿನ 3 ಗಂಟೆ ಸುಮಾರಿನಲ್ಲಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದೇ ಕುಟುಂಬದ ನಾಲ್ವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಾನ್ವಿಯ ವಿಠ್ಠಲ ನಗರದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net