ಕಾರು ಡಿಕ್ಕಿಯಾಗಿ ಪೊಲೀಸ್ ಪೇದೆಗೆ ಗಾಯ

Published on

ಹನೂರು: ಪಟ್ಟಣದಿಂದ ಎಲ್ಲೇಮಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸೋಮವಾರ ರಾತ್ರಿ ಕಾರು ಡಿಕ್ಕಿ ಹೊಡೆದು ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ.


ತಾಲೂಕಿನ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಪೇದೆ ಮಹಾಂತೇಶ್ (27) ಗಾಯಗೊಂಡವರು. ಕಾರ್ಯನಿಮಿತ್ತ ಹಾಸನಕ್ಕೆ ತೆರಳಿದ್ದು ರಾತ್ರಿ 9ರ ವೇಳೆಯಲ್ಲಿ ಮೈಸೂರಿನಿಂದ ಮ.ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳುತ್ತಿದ್ದರು. ಪಟ್ಟಣದ ಹೊರವಲಯದ ಎಲ್ಲೇಮಾಳದ ಮುಖ್ಯರಸ್ತೆ ಬದಿಯಲ್ಲಿನ ಹೋಟೆಲ್ ಬಳಿ ಬಸ್ ನಿಲ್ಲಿಸಲಾಗಿತ್ತು. ಈ ವೇಳೆ ಮೂತ್ರ ವಿಸರ್ಜನೆಗೆಂದು ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾಲು ಹಾಗೂ ತಲೆಗೆ ತೀವ್ರ ಗಾಯಗೊಂಡರು. ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net