

ಮಂಗಳೂರು: ಸೇತುವೆಗೆ ಡಿಕ್ಕಿ ಹೊಡೆದ ಕಾರು ಹೊಳೆಗೆ ಉರುಳಿಬಿದ್ದ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹೊಳೆಯಲ್ಲೂ ಸಿಗದೇ ಕಾರಿನಲ್ಲೂ ಇಲ್ಲದ ಈ ಯುವಕರು ಹೋಗಿರುವುದಾದರೂ ಎಲ್ಲಿ ಎಂಬ ಕುತೂಹಲ ಮನೆ ಮಾಡಿದೆ. ಈ ನಡುವೆ ಯುವಕರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಿಂದ ಹೊಳೆಯಲ್ಲಿ ಕಾರು ಬಿದ್ದಿರುವುದು ಭಾನುವಾರ ಬೆಳಗ್ಗೆ ತಿಳಿದುಬಂದಿತ್ತು, ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರಿಗೆ ಸಿಕ್ಕಿದ್ದು ನುಜ್ಜುಗುಜ್ಜಾದ ಕಾರು ಮಾತ್ರ. ಇಡೀ ಹೊಳೆಯನ್ನೇ ಜಾಲಾಡಿದರೂ,ಈ ಯುವಕರು ಪತ್ತೆಯಾಗಲೇ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಕರಣದ ಬೆನ್ನತ್ತಿರುವ ಪೊಲೀಸರಿಗೆ ಅಪಘಾತದ ಬಳಿಕ ಈ ಯುವಕರು ಅವರ ಮನೆಯವರಿಗೆ ಕರೆ ಮಾಡಿರುವುದು ತಿಳಿದುಬಂದಿದ್ದು, ಕರೆ ಮಾಡಿದ್ದ ಆ ನಂಬರ್ ಟ್ರೇಸ್ ಮಾಡುತ್ತಿರುವ ಪೊಲೀಸರಿಗೆ ಈ ಇಬ್ಬರು ಇಲ್ಲೇ ಎಲ್ಲೋ ಇರಬಹುದು ಎಂದು ಶಂಕಿಸಿದ್ದಾರೆ.
ಅಂದರೆ ಇಬ್ಬರು ಅಪಘಾತದ ವೇಳೆ ಕಾರಿನಲ್ಲಿದ್ದಾರಾ ಅಥವಾ ನಂತರ ತಪ್ಪಿಸಿಕೊಂಡು ಹೊರ ಬಂದಿದ್ದಾರೆಯೇ ಎಂಬುದು ಮಾತ್ರ ಯುವಕರ ಸಿಕ್ಕ ಬಳಿಕವೇ ಇದಕ್ಕೆ ಉತ್ತರ ಸಿಗಲಿದೆ. ಆದರೆ ಈ ಇಬ್ಬರು ಭಯದಿಂದ ಎಲ್ಲಾದರೂ ಅಡಗಿಕೊಂಡಿರಬಹುದು ಎಂದೂ ಹೇಳಲಾಗುತ್ತಿದ್ದು, ಸದ್ಯ ನಂಬರ್ ಟ್ರೇಸ್ ಮಾಡಿರುವ ಪೊಲೀಸರಿಗೆ ಸ್ಥಳದ ಕುರಿತು ಮಾಹಿತಿ ಸಿಕ್ಕಿದೆ ಎಂದು ತಿಳಿದುಬಂದಿದೆ. ಸದ್ಯ ತನಿಖೆ ಚುರುಕುಗೊಂಡಿದೆ. (ದಿಗ್ವಿಜಯ ನ್ಯೂಸ್)