ಗೋಳ್ತಮಜಲಿನಲ್ಲಿ ಕಾರುಗಳ ನಡುವೆ ಅಪಘಾತ

crime
Published on

ಬಂಟ್ವಾಳ: ತಾಲೂಕಿನ ಗೋಳ್ತಮಜಲು ಗ್ರಾಮದ ಕೆ.ಸಿ.ರೋಡು ಬಳಿ ಎರಡು ಕಾರುಗಳ ನಡುವೆ ಅಪಘಾತ ನಡೆದ ಬಳಿಕ ಉಂಟಾದ ನಿಂದನೆ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ಸಲ್ಲಿಕೆಯಾಗಿ ಪ್ರಕರಣ ದಾಖಲಾಗಿದೆ.

ಸೋಮವಾರ ಕುಟುಂಬವೊಂದು ಮಂಗಳೂರಿನಿಂದ ಬೆಂಗಳೂರಿಗೆ ಸಾಗುವ ದಾರಿ ಮಧ್ಯೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕೆ.ಸಿ.ರೋಡ್ ಬಳಿ ತಲುಪಿದಾಗ ಹಿಂದಿನಿಂದ ಬರುತ್ತಿದ್ದ ಕಾರಿನ ಚಾಲಕ ಮುಂಭಾಗದ ಕಾರಿನಲ್ಲಿದ್ದ ಹೆಂಗಸರನ್ನು ಚುಡಾಯಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕಾರನ್ನು ಸ್ವಲ್ಪ ಮುಂದೆ ಚಲಾಯಿಸಿದಾಗ ಆರೋಪಿ ಕಾರು ತಂದು ಗುದ್ದಿದ್ದಾನೆ, ಪರಿಣಾಮ ಕಾರಿನ ಹಿಂಭಾಗ ಜಖಂ ಆಗಿದೆ. ಈ ವೇಳೆ ಚಾಲಕ ಕಾರನ್ನು ನಿಲ್ಲಿಸಿದಾಗ, ಆರೋಪಿ ಬಂದು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಚಾಲಕನಿಗೆ ಹಲ್ಲೆ ನಡೆಸಿದ್ದಾನೆ. ಬಳಿಕ ಮಹಿಳೆಯ ಚಿನ್ನದ ಸರವನ್ನು ಎಗರಿಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ.

ಪ್ರತಿದೂರು: ಕಾರಿನಲ್ಲಿ ಪತ್ನಿಯೊಂದಿಗೆ ನರಹರಿ ಪರ್ವತದ ಬಳಿ ಪ್ರಯಾಣಿಸುತ್ತಿದ್ದಾಗ ಹಿಂದೆ ಇದ್ದ ಕಾರಿನ ಚಾಲಕ ನಿರ್ಲಕ್ಷೃದಿಂದ ಚಲಾಯಿಸಿಕೊಂಡು ಬಂದು ಕಾರಿನ ಮಿರರ್‌ಗೆ ಹಾನಿಗೊಳಿಸಿದ್ದಾನೆ.

ಈ ಬಗ್ಗೆ ಕಾರಿನ ಚಾಲಕನಲ್ಲಿ ಕೈ ಸನ್ನೆಯಲ್ಲಿ ಕೇಳಿ, ಮುಂದಕ್ಕೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕೆ.ಸಿ.ರೋಡಿನ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ, ಚಾಲಕ ತಡೆದದ್ದು ಮಾತ್ರವಲ್ಲದೇ ಆತನ ಕಾರಿನಲ್ಲಿದ್ದ 4 ಜನರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಹಾಗೂ ಕನ್ನಡಕವನ್ನು ದೋಚಿದ್ದಾರೆ. ಪತ್ನಿಗೂ ಅವಾಚ್ಯವಾಗಿ ಬೈದು, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಆಗ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಆರೋಪಿಗಳನ್ನು ತಡೆದಿದ್ದು, ಹಲ್ಲೆಯಿಂದ ಗಾಯಗೊಂಡ ಕಾರು ಚಾಲಕ ಹಾಗೂ ಅವರ ಪತ್ನಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net