More

    ಕಾಳಿಂಗ ಸರ್ಪಗಳ ಸಂಚಾರ ಶುರು

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಪ್ರತೀವರ್ಷವೂ ಮಾರ್ಚ್‌ನಿಂದ ಜೂನ್ ವರೆಗೆ ಕಾಳಿಂಗ ಸರ್ಪಗಳು ಕಾಣ ಸಿಗುತ್ತವೆ. ಇವು ಹೆಚ್ಚಾಗಿ ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಜನರ ಕಣ್ಣಿಗೆ ಗೋಚರಿಸುವುದು ಸಾಮಾನ್ಯವಾಗಿದೆ. ದಟ್ಟವಾದ ಕಾಡು ಪ್ರದೇಶ, ಮನೆಗಳ ವಠಾರ, ದನಗಳ ಹಟ್ಟಿ ಸಹಿತ ವಿವಿಧೆಡೆ ಕಂಡು ಬರುವ ಮೂಲಕ ಜನರಲ್ಲಿ ಆತಂಕಕ್ಕೆ ಕಾರಣವಾಗುತ್ತದೆ. ಇವುಗಳ ವಿಷವು ಬಹು ತೀಕ್ಷ್ಣವಾಗಿರುವ ಕಾರಣ ಇವು ಅತಿ ಅಪಾಯಕಾರಿಯಾಗಿವೆ.

    ಈ ಹಾವುಗಳು ಮಿಲನ ಕ್ರಿಯೆಗೂ ಮುನ್ನ ನಿರಂತರವಾಗಿ ಆಹಾರವನ್ನು ಹುಡುಕಿ ತಮ್ಮ ದೇಹವನ್ನು ಮಿಲನ ಪ್ರಕ್ರಿಯೆಗೆ ಸಿದ್ಧವಾಗಿಸಿಕೊಳ್ಳುತ್ತವೆ. ಮಾರ್ಚ್ ಮೊದಲ ವಾರದಿಂದ ಜೂನ್ ಮೊದಲ ವಾರದ ವರೆಗೂ ಇವುಗಳು ಮಿಲನ ಕ್ರಿಯೆ ನಡೆಸುತ್ತವೆ. ವಯಸ್ಸಿಗೆ ಬಂದ ಹೆಣ್ಣು ಹಾವು ತಾನು ಸಂತಾನೋತ್ಪತ್ತಿಗೆ ಸಿದ್ಧ ಎಂಬುದನ್ನು ಲೈಂಗಿಕ ಸಂಕೇತವಾದ ರಾಸಾಯನಿಕ ಅಂಶವನ್ನು ಹೊರ ಸೂಸುವ ಮೂಲಕ ವ್ಯಕ್ತಪಡಿಸುತ್ತದೆ. ಈ ರಸಾಯನಿಕಕ್ಕೆ ಆಕರ್ಷಿತವಾದ ಗಂಡುಗಳು ಮಿಲನಕ್ಕಾಗಿ ಹೆಣ್ಣು ಹಾವನ್ನು ಹುಡುಕಾಡಲು ಪ್ರಾರಂಭಿಸುತ್ತವೆ. ಇದಕ್ಕಾಗಿಯೇ ಕಾಡು ಪ್ರದೇಶದಿಂದ ನಾಡು ಪ್ರದೇಶಕ್ಕೆ ಕಾಳಿಂಗ ಸರ್ಪಗಳು ಸಂಚಾರ ನಡೆಸುತ್ತವೆ.

    ಕಾರ್ಕಳ ತಾಲೂಕಿನ ಶಿರ್ಲಾಲು, ಕೆರ್ವಾಶೆ, ಹೊಸ್ಮಾರು, ಈದು, ಅಜೆಕಾರು, ಮಾಳ, ಮುಡಾರು, ಬಜಗೋಳಿ, ಹೆಬ್ರಿ ತಾಲೂಕಿನ ಅಂಡಾರು, ಮುನಿಯಾಲು, ಮುದ್ರಾಡಿ, ಅಲ್ಬಾಡಿ, ಚಾರ, ಹೆಬ್ರಿ, ಕುಚ್ಚೂರು, ಕಬ್ಬಿನಾಲೆ, ನಾಡ್ಪಾಲು, ಮಡಾಮಕ್ಕಿ, ಆಗುಂಬೆ, ಕುಂದಾಪುರ ತಾಲೂಕು, ಬೆಳ್ತಂಗಡಿ ತಾಲೂಕಿನ ಭಾಗಗಳಲ್ಲಿ ಮಾರ್ಚ್ ತಿಂಗಳ ಮೊದಲ ವಾರದಿಂದ ಜೂನ್ ತಿಂಗಳ ವರೆಗೆ ಕಾಳಿಂಗ ಸರ್ಪಗಳ ಓಡಾಟ ನಡೆಸುವುದು ಸರ್ವೇ ಸಾಮಾನ್ಯವಾಗಿದೆ.

    ಕಾಳಿಂಗಕ್ಕೂ ಇದೆ ಗಡಿ ಮಿತಿ

    ಕಾಳಿಂಗ ಹೆಣ್ಣು ಹಾವುಗಳು 5 ಕಿ.ಮೀ. ಗಡಿರೇಖೆಯ ಮಿತಿಯ ವ್ಯಾಪ್ತಿಯ ಒಳಗೆ ಬದುಕುತ್ತವೆ. ಗಂಡು ಕಾಳಿಂಗಗಳು 8 ಕಿ.ಮೀ. ವ್ಯಾಪ್ತಿಯ ವಲಯದಲ್ಲಿ ವಾಸಿಸಬಲ್ಲವು. ಆದರೆ ಬೆದೆಗೆ ಬಂದ ಸಮಯದಲ್ಲಿ ಗಂಡು ಹಾವು ಸುಮಾರು 12 ಕಿ.ಮೀ. ದೂರದ ವರೆಗೂ ಕ್ರಮಿಸಿ ಮರಳಿ ಮೂಲ ನೆಲೆಗೆ ವಾಪಸಾಗಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಹೆಣ್ಣುಗಳು ಸಾಮಾನ್ಯವಾಗಿ 9 ಅಡಿಗಳಷ್ಟು, ಗಂಡು ಕಾಳಿಂಗ 12 ಅಡಿಗಳಿಗಿಂತ ಉದ್ದ ಬೆಳೆಯಬಲ್ಲವು. ಬೆದೆಗೆ ಬಂದ ಹೆಣ್ಣು ಹಾವು ಸಂಚರಿಸುವಾಗ ಲೈಂಗಿಕ ಸಂಕೇತವನ್ನು ಹೊರಸೂಸುವ ರಾಸಾಯನಿಕ ಬಿಡುಗಡೆಗೊಳಿಸುತ್ತಾ ಸಾಗುತ್ತವೆ. ಈ ರಾಸಾಯನಿಕ 11 ದಿನಗಳ ವರೆಗೂ ಕ್ರಿಯಾಶೀಲವಾಗಿರಬಲ್ಲದು.

    ಬೆದೆಯ ತಿಂಗಳಲ್ಲಿ ಕಾಳಿಂಗಗಳು ಮನೆಯ ಕಟ್ಟಿಗೆ ರಾಶಿ, ದನದ ಕೊಟ್ಟಿಗೆಗಳಲ್ಲಿ ಅಡಗಿ ಕುಳಿತರೆ ಉರಗ ಸಂರಕ್ಷರನ್ನು ಕರೆಯಿಸಿ ಹಾವನ್ನು ಸೆರೆ ಹಿಡಿದು ಸ್ವಲ್ಪ ದೂರದಲ್ಲಿ ಬಿಟ್ಟರೆ ಅಲ್ಲಿರುವ ಗಂಡು ಹೆಣ್ಣುಗಳು ಮಿಲನವಾಗುವ ಸಾಧ್ಯತೆ ಅಧಿಕ. ಬೆದೆಯ ಕಾಲ ವರ್ಷ ಪೂರ್ತಿ ಇರುವುದಿಲ್ಲ. ಹೆಣ್ಣು ಕಾಳಿಂಗ ಬೆದೆಗೆ ಬಂದಾಗ ಅದನ್ನು ಸೆರೆ ಹಿಡಿದು ದೂರ ಸಾಗಿಸಿಬಿಟ್ಟರೆ, ಅದಕ್ಕೆ ಗಂಡು ಸಿಗುವುದರೊಳಗೆ ಬೆದೆ ಚಕ್ರದ ಅವಧಿ ಮುಗಿದು ಗಂಡು ಸಿಕ್ಕರೂ ತಿರಸ್ಕರಿಸಬಹುದು. ಇಲ್ಲವೆ ಮಿಲನಕ್ಕೆ ಒಪ್ಪದ ಹೆಣ್ಣು ಹಾವು ಗಂಡಿಗೆ ಆಹಾರವಾಗಬಹುದು ಎನ್ನುವುದು ಉರಗ ತಜ್ಞರ ಅಭಿಪ್ರಾಯ.

    ಕಾಳಿಂಗ ಕಂಡರೆ ಏನು ಮಾಡಬೇಕು?

    ಕಾಳಿಂಗ ಸರ್ಪಗಳು ಅತ್ಯಂತ ವಿಷಕಾರಿಯಾಗಿರುವುದರಿಂದ ಕಟ್ಟಿಗೆ ರಾಶಿ, ಮನೆಯೊಳಗೆ ಬಂದರೆ ತುರ್ತಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. ಅಲ್ಲದೆ ಉರಗ ತಜ್ಞರನ್ನು ಸಂಪರ್ಕಿಸಿ ಸುರಕ್ಷಿತವಾಗಿ ಸ್ವಲ್ಪ ದೂರ ಬಿಡಬೇಕು. ಹಾವು ಹಿಡಿಯುವುದು ಅಪಾಯಕಾರಿ. ಸುರಕ್ಷಾ ವಿಧಾನಗಳು ಅತಿ ಮುಖ್ಯ. ಮದ್ಯಪಾನ ಮಾಡಿ ಹಾವು ಹಿಡಿಯಲು ಪ್ರಯತ್ನಿಸಬಾರದು. ಹಾವು ಹಿಡಿಯಲು ಉರಗ ತಜ್ಞರ ನೆರವನ್ನು ಪಡೆಯಬೇಕು. ರಸ್ತೆ ಅಗಲೀಕರಣ, ಅರಣ್ಯನಾಶಗಳಿಂದ ಕಾಳಿಂಗ ಸರ್ಪಗಳು ತೋಟಗಳಲ್ಲಿ ಕಾಣಸಿಗುತ್ತಿವೆ. ಬೆದೆಗೆ ಬಂದ ಹೆಣ್ಣು ಕಾಳಿಂಗಕ್ಕಾಗಿ ನಾಲ್ಕೈದು ಗಂಡು ಕಾಳಿಂಗ ಹಾವುಗಳು ಹಂಬಲಿಸುತ್ತವೆ. ಕಾಳಿಂಗ ಸರ್ಪಗಳು ಹೆಚ್ಚಾಗಿ ಕಂಡು ಬಂದಾಗ ಭಯ ಪಡದೆ ಜಾಗೃತೆ ವಹಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು ಮುಖ್ಯವಾಗಿದೆ ಎನ್ನುತ್ತಾರೆ ಉರಗ ತಜ್ಞರು.

    ಮಾಡದಿರಿ ಸೆರೆ ಹಿಡಿಯುವ ಸಾಹಸ

    ಬೆದೆಯ ತಿಂಗಳಲ್ಲಿ ಹೆಣ್ಣು ಅಥವಾ ಗಂಡು ಕಾಳಿಂಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬಾರದು. ಪರಿಣತಿ ಹೊಂದದೆ ಹಾವುಗಳನ್ನು ಹಿಡಿಯಲು ಪ್ರಯತ್ನಿಸುವುದು ತುಂಬಾನೆ ಅಪಾಯಕಾರಿ. ಕಾಳಿಂಗಗಳ ಮಿಲನದ ದೃಶ್ಯಗಳು ಕಂಡುಬಂದರೆ ದೂರದಿಂದ ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿ. ಹಾವುಗಳು 2-3 ದಿನ ಅಲ್ಲಿದ್ದು, ನಂತರ ಹೊರಟು ಹೋಗುತ್ತವೆ. ಸೆರೆ ಹಿಡಿದು ದೂರ ಬಿಡುವ ಸಾಹಸ ಮಾಡಬಾರದು ಎನ್ನುತ್ತಾರೆ ಉರಗ ತಜ್ಞ ನಾಗರಾಜ್ ಬೆಳ್ಳೂರು.

    ವಿಷಕಾರಿ ಹಾವುಗಳೇ ಕಾಳಿಂಗದ ಮುಖ್ಯ ಆಹಾರ

    ಕಾಳಿಂಗ ಸರ್ಪಗಳನ್ನು ಹಿಡಿಯಲು ಪ್ರಯತ್ನಿಸಬಾರದು. ವಿಷಕಾರಿ ಹಾವುಗಳೇ ಕಾಳಿಂಗದ ಮುಖ್ಯ ಆಹಾರ. ಇಲಿ, ಹೆಗ್ಗಣಗಳು ಮನೆಯೊಳಗೆ, ಅಕ್ಕಪಕ್ಕ ಬರದಂತೆ ನೋಡಿಕೊಂಡರೆ ಹಾವುಗಳು ಮನೆಯೊಳಗೆ ಬರುವುದಿಲ್ಲ. ಕಾಳಿಂಗ ಸರ್ಪಗಳು ಪರಿಸರ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಮಾರ್ಚ್‌ನಿಂದ ಜೂನ್ ತಿಂಗಳ ವರೆಗೆ ಮಿಲನ ಪ್ರಕ್ರಿಯೆ ನಡೆಯುತ್ತದೆ. ಈ ಸಂದರ್ಭದಲ್ಲಿ ಹೆಚ್ಚಾಗಿ ಜನರ ಕಣ್ಣಿಗೆ ಗೋಚರಿಸುತ್ತವೆ ಎನ್ನುತ್ತಾರೆ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಉರಗ ತಜ್ಞ ಅಜಯ್‌ಗಿರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts