ಹೊಳೆನರಸೀಪುರ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರುಗಳು ನಜ್ಜು ಗುಜ್ಜಾಗಿದ್ದು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲೂಕಿನ ಬಾಚನಹಳ್ಳಿ ಕೊಪ್ಪಲು ಗ್ರಾಮದ ಗೇಟಿನಲ್ಲಿ ಭಾನುವಾರ 4.30ರಲ್ಲಿ ಹಳ್ಳಿ ಮೈಸೂರು ಉಪ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದ್ದು, ಎಲ್ಲರೂ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಕೆಎ-09, ಎಂ.ಜೆ.4463 ನಂಬರಿನ ಕಾರಿನಲ್ಲಿದ್ದವರು ಮೂಲತಃ ಮೈಸೂರಿನವರಾಗಿದ್ದು, ಗಂಡ, ಹೆಂಡತಿ ಹಾಗೂ ಮಗು ಶೃಂಗೇರಿಯಿಂದ ಮೈಸೂರಿಗೆ ತೆರಳುತ್ತಿದ್ದರು.
ಕೆಎ-13, ಝೆಡ್ 1512 ಸಂಖ್ಯೆಯ ಕಾರಿನಲ್ಲಿ ಮೂಲತಃ ಹಾಸನದವರಾಗಿದ್ದು, ಮೈಸೂರಿನಿಂದ ಮರಳಿ ಹಾಸನಕ್ಕೆ ಕುಟುಂಬ ಸಹಿತವಾಗಿ ತೆರಳುತ್ತಿದ್ದು ಎರಡೂ ಕಾರಿನಲ್ಲಿ ಕುಟುಂಬ ಸಮೇತರಾಗಿ ಪ್ರಯಾಣ ಮಾಡುತ್ತಿದ್ದರು. ಅಪಘಾತದ ತೀವ್ರತೆಗೆ ಎರಡೂ ಕಾರಿನ ಚಕ್ರಗಳು ಕಳಚಿ ಬಿದ್ದಿವೆ.