

ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಉದನೆ ಪೇಟೆಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ.
ಮಂಗಳೂರು ಮಲ್ಲೂರು ಗ್ರಾಮದ ಬದ್ರಿಯಾನಗರ ನಿವಾಸಿ ಮೊಹಮ್ಮದ್ ಇಕ್ಬಾಲ್(29) ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಹಮ್ಮದ್ ಇಕ್ಬಾಲ್ ಅವರು ಖಾಸಗಿ ಕಂಪನಿಯ ಗೂಡ್ಸ್ ಲಾರಿಯಲ್ಲಿ ಚಾಲಕರಾಗಿದ್ದು, ರಜೆಯಲ್ಲಿ ಊರಿಗೆ ಬಂದಿದ್ದರು. ಪರಿಚಯದ ವ್ಯಕ್ತಿಯೊಬ್ಬರ ಕಾರಿನಲ್ಲಿ ಮಾಣಿಯಿಂದ ಬೆಂಗಳೂರಿಗೆ ಹೊರಟಿದ್ದರು. ರಾತ್ರಿ 1ರ ಸುಮಾರಿಗೆ ಉದನೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಬದಿಯ ಡಿವೈಡರ್‌ಗೆ ಡಿಕ್ಕಿಯಾಗಿದೆ. ಕಾರು ಜಖಂಗೊಂಡಿದ್ದು, ಪ್ರಯಾಣಿಕರಾಗಿದ್ದ ಮೊಹಮ್ಮದ್ ಇಕ್ಬಾಲ್ ಅವರಿಗೆ ಗಾಯವಾಗಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.