

ಸಂದೀಪ್ ಸಾಲ್ಯಾನ್ ಬಂಟ್ವಾಳ
ಹಲವು ಸಮಯಗಳಿಂದ ಆರೋಗ್ಯ ಇಲಾಖೆಯ ಸಂಚಾರಿ ಘಟಕದ ವಸತಿಗೃಹದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಸಿ.ರೋಡಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣಗೊಳ್ಳುವ ಕನಸು ಚಿಗುರೊಡೆದಿದೆ.
ನಗರ ಆರೋಗ್ಯ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಎನ್‌ಎಚ್‌ಎಂ 15ನೇ ಹಣಕಾಸು ಯೋಜನೆಯಅಡಿ ನೂತನ ಕಟ್ಟಡಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರಿಂಗ್ ಘಟಕ ತಾಂತ್ರಿಕ ಮಂಜೂರಾತಿ ನೀಡಿದೆ.
ಬಂಟ್ವಾಳ ನಗರ ಭಾಗದ ಜನರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಕೆಲ ವರ್ಷಗಳ ಹಿಂದೆ ಬಿ.ಸಿ.ರೋಡಿನ ಕೈಕಂಬದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲಾಯಿತು. ಸ್ವಂತ ಕಟ್ಟಡ ಇಲ್ಲದ ಕಾರಣ ಸಂಚಾರಿ ಆರೋಗ್ಯ ಘಟಕದ ಬಳಿ ಖಾಲಿ ಉಳಿದಿದ್ದ ಸಂಚಾರಿ ಆರೋಗ್ಯ ಘಟಕದ ವೈದ್ಯಾಧಿಕಾರಿಯ ವಸತಿಗೃಹದಲ್ಲಿ ತಾತ್ಕಾಲಿಕವಾಗಿ ಕಾರ್ಯಾರಂಭಗೊಳಿಸಲಾಯಿತು. ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸೇವೆ ಪಡೆಯಲು ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದುದರಿಂದ ವಸತಿಗೃಹದಲ್ಲಿ ಸ್ಥಳಾವಕಾಶ ಕಡಿಮೆಯಾಗಿ ಸುಸಜ್ಜಿತ ಕಟ್ಟಡದ ಅವಶ್ಯಕತೆ ಮನಗಂಡು ಸ್ವಂತ ಕಟ್ಟಡ ನಿರ್ಮಾಣಗೊಳಿಸುವಂತೆ ಹಲವು ವರ್ಷಗಳ ಹಿಂದೆ ಸರ್ಕಾರಕ್ಕೆ ಪಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಇದೀಗ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಪತ್ರ, ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ ಮನವಿ ಮೇರೆಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಟ್ಟಡ ಮಂಜೂರಾಗಿದ್ದು, ಶೀಘ್ರ ನಿರ್ಮಾಣಗೊಳ್ಳಲಿದೆ. ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಗುತ್ತಿಗೆದಾರರನ್ನು ನಿಗದಿಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
294 ಚ.ಮೀ. ವಿಸ್ತೀರ್ಣದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣವಾಗಲಿದೆ. ನೆಲ ಅಂತಸ್ತಿನಲ್ಲಿ 218 ಚ.ಮೀ., ಮೇಲಿನ ಅಂತಸ್ತಿನಲ್ಲಿ 76 ಚ.ಮೀ. ವಿಸ್ತೀರ್ಣವಿರಲಿದೆ. ಕೆಲಭಾಗದಲ್ಲಿ ವೈದ್ಯಾಧಿಕಾರಿಗಳ ಕೊಠಡಿ, ಪ್ರಯೋಗಾಲಯ, ಚಿಕಿತ್ಸಾ ಕೊಠಡಿ, 2 ಬೆಡ್‌ಗಳ ಡೇ ಕೇರ್ ವ್ಯವಸ್ಥೆ ಇರಲಿದೆ. ಮೇಲಂತಸ್ತಿನಲ್ಲಿ ಸ್ನೇಹ ಕ್ಲಿನಿಕ್, ಕಚೇರಿ ಇರಲಿವೆ.
ಸ್ಥಳಾವಕಾಶ ಕೊರತೆ
ಹಲವು ವರ್ಷಗಳಿಂದ ಕೈಕಂಬದಲ್ಲಿರುವ ಸಂಚಾರಿ ಆರೋಗ್ಯ ಘಟಕದ ಬಳಿಯ ವಸತಿಗೃಹದಲ್ಲಿ ಯುಪಿಎಚ್‌ಸಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಸಣ್ಣ ಮನೆಯಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿ, ಪ್ರಯೋಗಾಲಯ, ಚುಚ್ಚುಮದ್ದು, ಸಮಾಲೋಚನಾ ಕೊಠಡಿ ಕಾರ್ಯನಿರ್ವಹಿಸಬೇಕಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾದರೆ ನಿಭಾಯಿಸುವ ಸಂಕಷ್ಟ ವೈದ್ಯರಿಗೆ ಗೊತ್ತು. ವಸತಿಗೃಹದಲ್ಲಿ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದರಿಂದ ವಸತಿಗೃಹ ಬಯಸುತ್ತಿದ್ದ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗೆ ತೊಂದರೆಯಾಗುತ್ತಿದೆ ಎನ್ನುವ ದೂರು ಕೇಳಿಬಂದಿತ್ತು. ಸ್ವಂತ ಕಟ್ಟಡ ನಿರ್ಮಾಣಗೊಂಡರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ನಿವೇಶನ ಗುರುತು
ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಈಗ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯಾಚರಿಸುತ್ತಿರುವ ವಸತಿಗೃಹದ ಮುಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದೆ. ಆರೋಗ್ಯ ಇಲಾಖೆ ಇಂಜಿನಿಯರಿಂಗ್ ವಿಭಾಗ ಕಟ್ಟಡ ನಿರ್ಮಾಣ ಕೆಲಸ ಮಾಡಲಿದೆ.
ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ವಂತ ಕಟ್ಟಡಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಗುತ್ತಿಗೆದಾರರ ನೇಮಕ ಪ್ರಕ್ರಿಯೆ ಆದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯ ನಡೆಯಲಿದೆ. ಗುರು ಪ್ರಸಾದ್, ಕಾರ್ಯನಿರ್ವಾಹಕ ಇಂಜಿನಿಯರ್, ಆರೋಗ್ಯ ಇಲಾಖೆ ಇಂಜಿನಿಯರಿಂಗ್ ಘಟಕ ಪುರಸಭಾ ವ್ಯಾಪ್ತಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವಂತ, ಸುಸಜ್ಜಿತ ಕಟ್ಟಡ ಬೇಕೆನ್ನುವ ಬೇಡಿಕೆಯಂತೆ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ವಾಸು ಪೂಜಾರಿ ಲೊರೆಟ್ಟೋ ಅಧ್ಯಕ್ಷರು, ಬಂಟ್ವಾಳ ಪುರಸಭೆ https://www.vijayavani.net/nda-classes-orientation https://www.vijayavani.net/labor-awareness-movement-consultation-meeting