

ಗುತ್ತಲ: ಕಳೆದ 15 ದಿನಗಳಿಂದ ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ಆನೆಯನ್ನು ಗುತ್ತಲ ಹೊರ ವಲಯದ ಕುರಿ ಸಂವರ್ಧನಾ ಕೇಂದ್ರದ ಸಮೀಪ ದೊಡ್ಡ ಕೆರೆಯಂಗಳದಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಬೆಳಗ್ಗೆ ಯಶಸ್ವಿಯಾಗಿದ್ದಾರೆ.
ಡಿಎಫ್ಒ ಬಾಲಕೃಷ್ಣ ನಿರ್ದೇಶನದಂತೆ ಬಾನುಮತಿ ಎಂಬ ಹೆಣ್ಣಾನೆಯನ್ನು ಕೆರೆಯ ಪಕ್ಕದ ಜಮೀನಿನ ಬಳಿ ಕಟ್ಟಿ ನಿಲ್ಲಿಸಲಾಗಿತ್ತು. ಇದರ ಸನಿಹಕ್ಕೆ ನಸುಕಿನ 3ರಿಂದ 4 ಗಂಟೆಯ ಸುಮಾರಿಗೆ ಬಂದ ಕಾಡಾನೆ ಕೆಲ ಸಮಯ ಅಲ್ಲಿಯೇ ಕಳೆದು ನಂತರ ಆಹಾರಕ್ಕಾಗಿ ಪಕ್ಕದ ಜಮೀನಿಗಳಿಗೆ ತೆರಳಿ ಬೆಳಗ್ಗೆ 5 ಗಂಟೆಗೆ ಮರಳಿ ಬಾನುಮತಿ ಇರುವಲ್ಲಿಗೆ ಬಂದಿತು. ಇಷ್ಟರಲ್ಲಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಚುರುಕುಗೊಳಿಸಿದರು. ಸ್ಥಳಕ್ಕೆ ಆಗಮಿಸಿದ್ದ ಡೆಹರಾಡೂನಿನ ಭಾರತೀಯ ವನ್ಯ ಜೀವಿ ಸಂಸ್ಥಾನದ ವಿಜ್ಞಾನಿ ಡಾ. ಸನತ ಮುಳಿಯಾ ಅವರು ಸಾಗರ ಎಂಬ ಆನೆಯೊಂದಿಗೆ ತೆರಳಿ ಬಾನುಮತಿಯ ಪಕ್ಕದಲ್ಲಿದ್ದ ಕಾಡಾನೆಗೆ ಸುಮಾರು 50 ಅಡಿ ದೂರದಿಂದ ಬಂದೂಕು ಮೂಲಕ ಅರವಳಿಕೆ ಮದ್ದು ನೀಡಿದರು.
ನಂತರ ನೆಲಕ್ಕುರುಳಿದ ಕಾಡಾನೆಯನ್ನು ಸಾಗರ, ಬಾಲಣ್ಣ, ಬಹದ್ದೂರ ಹಾಗೂ ಸೋಮಣ್ಣ ಎಂಬ ಆನೆಗಳು ಸುತ್ತುವರಿದವು. ನಂತರ ಮಾವುತರು ಹಾಗೂ ಕಾವಾಡಿಗಳು ದೊಡ್ಡದಾದ ಹಗ್ಗಗಳನ್ನು ಕಾಡಾನೆ ಕಾಲಿಗೆ ಹಾಗೂ ಕೊರಳಿಗೆ ಕಟ್ಟಿದ ನಂತರ, ಡಾ. ಸನತ ಮುಳಿಯಾ, ಡಾ. ತಮ್ಮಯ್ಯ ಚಕ್ಕೇರಾ, ಜರ್ಮನಿಯ ಜಿಐಜಡ್ ಸಂಸ್ಥೆಯ ಡಾ. ನವನೀತನ, ವನ್ಯ ಜೀವಿ ವಿಭಾಗದ ವೈದ್ಯ ಡಾ. ವಿನಯ ಎಸ್. ಅವರ ತಂಡ ಕಾಡಾನೆಗೆ ಚಿಕಿತ್ಸೆ ನೀಡಿದರು.
ಭಾರತೀಯ ವನ್ಯ ಜೀವಿ ಸಂಸ್ಥಾನದ ವಿಜ್ಞಾನಿ ಡಾ. ಸನತ ಮುಳಿಯಾ, ವನ್ಯ ಜೀವಿ ವೈದ್ಯ ಡಾ. ಡಾ. ವಿನಯ ಎಸ್. ಅವರ ಅಮೂಲ್ಯ ಸಲಹೆ, ಮಾವುತರು, ಕಾವಾಡಿಗರ ಧೈರ್ಯ, ನಮ್ಮ ಇಲಾಖೆಯ ಸಿಬ್ಬಂದಿಗಳ ಸತತ ಪ್ರಯತ್ನ, ಸಾರ್ವಜನಿಕರ ಸಹಕಾರದಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ. | ಮಂಜುನಾಥ ಚವ್ಹಾಣ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ ವಲಯ
ಬಾನುಮತಿ ಬಲೆಗೆ ಬಿದ್ದ ಕಾಡಾನೆ: ಕಳೆದ 15 ದಿನಗಳಿಂದ ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ 14ರ ಪ್ರಾಯದ ಕಾಡಾನೆ ಕೊನೆಗೂ ಬಾನುಮತಿ ಎಂಬ ಹೆಣ್ಣಾನೆಗೆ ಆಕರ್ಷಿತಗೊಂಡು ಸಿಕ್ಕಿಬಿದ್ದಿದೆ. ಬೆಳಗ್ಗೆ ಬಾನುಮತಿಯೊಂದಿಗೆ ಇದ್ದ ಕಾಡಾನೆ (ಸಲಗ) ದೂರದಲ್ಲಿ ನಿಂತಿದ್ದ ಆರ್ಎಫ್ಒ ರಾಮಪ್ಪ ಪೂಜಾರ ಹಾಗೂ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾಗುತ್ತಿದ್ದಂತೆ ಅಲ್ಲಿಂದ ವಾಹನದಲ್ಲಿ ರಾಮಪ್ಪ ಪೂಜಾರ ಹಾಗೂ ಸಿಬ್ಬಂದಿ ಅವಿತಕೊಂಡು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
ಭದ್ರಾ ಹುಲಿ ಸಂರಕ್ಷಣಾ ವಲಯಕ್ಕೆ ರವಾನೆ: ಆನೆ ಆರೋಗ್ಯವನ್ನು ಪರೀಕ್ಷಿಸಿ ಕ್ರೇನ್ ಮೂಲಕ ಲಾರಿಯೊಳಗೆ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಭದ್ರಾ ಹುಲಿ ಸಂರಕ್ಷಣಾ ವಲಯಕ್ಕೆ ಸಾಗಿಸಲಾಯಿತು. ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿದ್ದರಿಂದ ಅದರ ಆರೋಗ್ಯ, ಚಲನ ವಲನಗಳ ಬಗ್ಗೆ ತಿಳಿಯಲು ಸಹಕಾರಿಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.