

ಕೃತ್ಯಕ್ಕಿಳಿವ ಮುನ್ನ ದೇವರಿಗೆ ಪೂಜೆ ಸಲ್ಲಿಸುತ್ತಿದ್ದ ಖದೀಮರು!
ಮಾಗಡಿ
ಪಟ್ಟಣದಲ್ಲಿ ಕಳ್ಳತನ ಮಾಡಿ ಸಾಕಷ್ಟು ಆತಂಕ ಮೂಡಿಸಿದ್ದ ಇಬ್ಬರು ಅಂತಾರಾಜ್ಯ ದರೋಡೆಕೋರರನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಕಡೂರಿನ ಮಹಮದ್ ಸಾದಿಕ್, ಶಿವಮೊಗ್ಗ ಅಮೀರ್ ಅಮುಜಾ ಬಂಧಿತರು.
ಮಹಮದ್ ಸಾಧಿಕ್ ಹಾಗೂ ಸಹಚರರು ರಾಜ್ಯದ ಹಲವೆಡೆ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ: ಪಟ್ಟಣದ ಆರ್ಯವೈಶ್ಯ ಸಮಾಜದ ಮುಖಂಡ ವೇಣುಗೋಪಾಲ್ ಅವರ ಮನೆಯಲ್ಲಿ ಸುಮಾರು ಐದು ಕೆಜಿ ಚಿನ್ನಾಭರಣ ಮತ್ತು 6 ಲ ರೂ. ಕಳವು ಮಾಡಲಾಗಿತ್ತು. ಈ ಪ್ರಕರಣ ಪಟ್ಟಣದ ಜನತೆಯಲ್ಲಿ ಆತಂಕ ಮೂಡಿಸಿತ್ತು.
ಪ್ರಕರಣದ ಬೆನ್ನತ್ತಿದ ಡಿವೈಎಸ್ಪಿ ಪ್ರವಿಣ್, ಮಾಗಡಿ ಸಿಪಿಐ ಜಿ.ವೈ.ಗಿರಿರಾಜ್, ಕುದೂರು ಸಿಪಿಐ ನವೀನ್ ನೇತೃತ್ವದಲ್ಲಿ ಸಿಬ್ಬಂದಿ ಬೀರಪ್ಪ, ಸೂರ್ಯಕುಮಾರ್, ಮುನೀಂದ್ರ, ಹೇಮಂತ್ ಕುಮಾರ್ ಅವರ ಎರಡು ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು.
ಸಿಕ್ಕಿದ್ದು ಹೇಗೆ ?: ಕಳವು ಸಂದರ್ಭದಲ್ಲಿ ದರೋಡೆಕೋರರು ಫೋನ್ ಬಳಸಿರಲಿಲ್ಲ. ಆದರೆ ಕಳವು ಮಾಡಿದ ನಂತರ ಪಟ್ಟಣದ ಕೆಲವು ಬೀದಿಗಳಲ್ಲಿ ಓಡಾಡಿದ್ದಾರೆ. ಅವರ ಮುಖ ಚಹರೆ ಮೇಲೆ ಸಿಪಿಐ ಗಿರಿರಾಜ್ ಹಲವು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ರಾಜ್ಯದ ಹಲವೆಡೆಗಳಲ್ಲಿ ದರೋಡೆಕೋರರಾದ ಕಡೂರಿನ ಮಹಮದ್ ಸಾದಿಕ್, ತೀರ್ಥಹಳ್ಳಿಯ ಅಮೀರ್ ಅಮುಜಾ ಮತ್ತು ಸಹಚರರೇ ಮಾಗಡಿಯ ವೇಣು ಮನೆಯಲ್ಲಿ ಕಳವು ಮಾಡಿರುವುದು ದೃಢವಾಗಿತ್ತು.
ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಲಾಗಿತ್ತು. ಮಾಗಡಿ ಪೊಲೀಸರು ಬೆನ್ನುಹತ್ತಿದ್ದಾರೆಂಬ ಮಾಹಿತಿ ಪಡೆದ ಸಾಧಿಕ್ ಮತ್ತು ಅಮೀರ್, ಸಹಚರರೊಂದಿಗೆ ನಕಲಿ ಪಾಸ್ ಪೋರ್ಟ್ ಬಳಸಿ ಬಾಂಗ್ಲಾದೇಶಕ್ಕೆ ನುಸುಳುವ ಪ್ಲಾನ್ ಮಾಡಿದ್ದರು. ಪ್ರಕರಣದ ಬೆನ್ನತ್ತಿದ್ದ ಸಿಪಿಐ ಗಿರಿರಾಜ್ ಸಿಬ್ಬಂದಿಯೊಂದಿಗೆ ಮುಂಬೈ ವಿಮಾನ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ದೇವರ ಮೊರೆ: ಕಳವು ಮಾಡುವ ಮೋದಲು ತೋಟವೊಂದರಲ್ಲಿ ಪ್ರತಿಷ್ಠಾಪಿಸಿದ್ದ ಭೂತಮ್ಮ ದೇವಿ, ಬಾಬಯ್ಯ, ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸುತ್ತಿದ್ದ ಖದೀಮರು, ಯಾವುದೇ ಕಳ್ಳತನಕ್ಕೆ ಯೋಜನೆ ಮಾಡುವ ಮೊದಲು ಈ ಮೂರು ದೈವಗಳಿಗೆ ಪೂಜೆ ಮಾಡಿ ಅಪ್ಪಣೆ ಪಡೆದುಕೊಳ್ಳುತ್ತಿದ್ದರಂತೆ. ದೇವರ ಅಪ್ಪಣೆ ಪಡೆದುಕೊಂಡೆವೆಂಬ ನಂಬಿಕೆಯಿಂದ ಅಷ್ಟ ದಿಕ್ಕುಗಳಿಗೆ ತೆರಳಿ ಬೀಗ ಹಾಕಿರುವ ಮನೆಗಳು, ಮನೆ ಮುಂದೆ ಐಷಾರಾಮಿ ಕಾರುಗಳಿರುವ ಮನೆಗಳಿಗೆ ಕನ್ನ ಹಾಕಿ ದರೋಡೆ ಮಾಡುವುದೇ ಇವರ ವೃತ್ತಿಯಾಗಿದೆ.
ಮಹಜರು: ಸಾಧಿಕ್ ಮತ್ತು ಅಮೀರ್ ಪಟ್ಟಣದ ಹಲವೆಡೆಗಳಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದನ್ನು ಬಾಯಿಬಿಟ್ಟಿದ್ದ್ದರಿಂದ ಪಟ್ಟಣದ ಕೆಲವೆಡೆಗಳಲ್ಲಿ ಪೊಲೀಸರು ಮಹಜರು ನಡೆಸಿದರು.