ಕಸ ಹಾಕುವವರ ಫೋಟೋ ಸೆರೆ ಹಿಡಿದು ಬಹುಮಾನ ಗೆಲ್ಲಿ

16. vpt .1.1.
Published on

ವಿರಾಜಪೇಟೆ: ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ತಪ್ಪಿಸಲು ವಿರಾಜಪೇಟೆ ಸಾಮಾನ್ಯ ಸಭೆಯಲ್ಲಿ ಹೊಸ ಮಾರ್ಗ ಕಂಡು ಹಿಡಿಯಲಾಗಿದ್ದು, ರಸ್ತೆಯಲ್ಲಿ ಕಸ ಸುರಿಯುವವರ ಫೋಟೋ ಸೆರೆ ಹಿಡಿದರೆ ಪುರಸಭೆ ವತಿಯಿಂದ 100 ರೂ. ಬಹುಮಾನ ಸಿಗಲಿದೆ.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಮನೆಯಪಂಡ ದೇಚಮ್ಮ ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಕಸ ವಿಲೇವಾರಿ ಮತ್ತು ಕಸದ ಸಮಸ್ಯೆಗಳ ಬಗ್ಗೆ ಹಾಗೂ ಪೌರಕಾರ್ಮಿಕರಿಗೆ ದಿನನಿತ್ಯ ಅನುಭವಿಸುವ ಸಮಸ್ಯೆಗಳ ಬಗ್ಗೆ ಪರಿಹಾರ ತಿಳಿಸುವಂತೆ ಅಧ್ಯಕ್ಷರು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಡಿ.ಪಿ.ರಾಜೇಶ್ ಅವರು, ನಗರದಲ್ಲಿ ಕೆಲವು ಆಯ್ದ ಭಾಗಗಳಲ್ಲಿ ಕಸ ಸಮಸ್ಯೆ ಮುಕ್ತಿಗಾಗಿ ಹಲವು ಯೋಜನೆಗಳನ್ನು ರೂಪಿಸಿದರೂ ಯಾವುದೇ ಪರಿಹಾರ ಸಿಗಲಿಲ್ಲ. ಆದರಿಂದ ವಿದ್ಯಾರ್ಥಿಗಳು ಕಸ ಹಾಕುವವರ ಸ್ಥಳದಲ್ಲೇ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿದರೆ ಪುರಸಭೆ ವತಿಯಿಂದ 100 ರೂ. ಬಹುಮಾನ ನೀಡುವಂತೆ ಘೋಷಣೆ ಮಾಡಬೇಕು. ಪತ್ರಿಕೆಗಳಲ್ಲಿ ಪ್ರಸಾರ ಮಾಡಿ ಅಲ್ಲದೆ ಕಸ ಹಾಕಿದವರ ಕಸವನ್ನು ಮನೆ ಮುಂದೆ ಹಾಕಿ ಮುಂದೆ ಕಸ ಹಾಕುವುದನ್ನು ನಿಲ್ಲಿಸುತ್ತಾರೆ ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿದ್ದ ಸದಸ್ಯರು ಒಪ್ಪಿಗೆ ಸೂಚಿಸಿದರು.

ನಗರದ ಅಭಿವೃದ್ಧಿಗಾಗಿ ಶಾಸಕ ಎ.ಎಸ್.ಪೊನ್ನಣ್ಣ ಅವರು ಸುಮಾರು 20 ಕೋಟಿ ರೂ. ಅನುದಾನ ತಂದಿದ್ದಾರೆ. ಇದೀಗ ಮೊದಲ ಹಂತದ ಸುಮಾರು 9 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಅ.24 ರಂದು ನಗರದ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಲಿದ್ದಾರೆ ಎಂದು ಅಧ್ಯಕ್ಷ ಮನೆಯಪಂಡ ದೇಚಮ್ಮ ಕಾಳಪ್ಪ ಮಾಹಿತಿ ನೀಡಿದರು.

ನಗರದಲ್ಲಿ ರಸ್ತೆ ವಿಸ್ತರಣೆ ಮತ್ತು ವಾಹನ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದೆ. ಮುಖ್ಯ ರಸ್ತೆಯ ಬದಿಯಲ್ಲಿ ಪುರಾತನ ಕಟ್ಟಡಗಳನ್ನು ಕೆಡವಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ಮಾಡುವ ವ್ಯಕ್ತಿಗಳು ವಾಹನ ನಿಲುಗಡೆಗೆ ಸ್ಥಳ ಬಿಡದೆ ಕಟ್ಟಡ ಮುಂದೆಯೇ ಬೇಲಿ ನಿರ್ಮಾಣ ಮಾಡುತಿದ್ದಾರೆ. ಇದನ್ನು ತೆರವುಗೊಳಿಸಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಪಟ್ಟಡ ರಂಜಿ ಪೂಣಚ್ಚ ಮನವಿ ಮಾಡಿದರು.

ಪೊಲೀಸರ ಸಹಕಾರ ಪಡೆದು ಬೇಲಿ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ಸಭೆ ಆರಂಭಕ್ಕೂ ಮೊದಲೇ ನನಗೆ ಮಾತನಾಡಲು ಅವಕಾಶ ನೀಡುವಂತೆ ಸಿ.ಕೆ.ಪೃಥ್ವಿನಾಥ್ ಪಟ್ಟು ಹಿಡಿದರು. ಇದರಿಂದ ಕೆಲಕಾಲ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಬಳಿಕ ಪೊಲೀಸರ ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸಿದರು. ಸಭೆಯ ಆರಂಭದಲ್ಲಿ ಅಗಲಿದ ಸದಸ್ಯ ಬೋವೇರಿಯಂಡ ಆಶಾ ಸುಬ್ಬಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪುರಸಭೆಯ ಉಪಾಧ್ಯಕ್ಷರಾದ ಫಸಿಹಾ ತಬುಸ್ಸಂ, ಸದಸ್ಯರಾದ ಮೊಹಮ್ಮದ್ ರಾಫಿ, ಎಚ್.ಎಸ್.ಮತೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್, ಆರೋಗ್ಯ ಸಮಿತಿ ಅಧ್ಯಕ್ಷ ಪೂರ್ಣಿಮಾ, ಸುನಿತಾ ಜೂನಾ, ಅನಿತಾ ಕುಮಾರ್, ಸುಭಾಷ್, ರಜನಿಕಾಂತ್ ವಿ.ಆರ್.ಅಗಸ್ಟೀನ್ ಬೆನ್ನಿ, ಯಶೋಧ ಮಂದಣ್ಣ, ಹೇಮಾಕುಮಾರ್, ರೀತು ಸಿಂಗ್, ಸೋಮೇಶ್ ,ಪುರಸಭೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net