ಬದಲಾದ ಜೀವನಶೈಲಿಯಿಂದ ಕ್ಯಾನ್ಸರ್ ಹೆಚ್ಚಳ

IMG-20250204-WA0124
ಬಸ್ತಿಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ಜಾಗೃತಿ ದಿನ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಕುರಿತಾದ ಅರಿವಿನ ಮಾಹಿತಿಯುಳ್ಳ ಪೋಸ್ಟರ್‌ಗಳನ್ನು ಗಣ್ಯರು ಪ್ರದರ್ಶಿಸಿದರು. ಎಸ್.ಡಿ.ಬೆನ್ನೂರ್, ಜಿ.ಮೋಹನ್, ಅರುಣಾಕ್ಷಿ ಇತರರು ಇದ್ದರು.
Published on

ಕೆ.ಆರ್.ಸಾಗರ: ಬದಲಾದ ಕೃಷಿ ಪದ್ಧತಿ, ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಇಲ್ಲದ ಜೀವನ ಶೈಲಿಯಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಹೆಚ್ಚುತ್ತಿವೆ. ಆದ್ದರಿಂದ ಅರಿವು, ನಿಯಂತ್ರಣವೇ ಕ್ಯಾನ್ಸರ್‌ಗೆ ಔಷಧವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಹೇಳಿದರು.

ಮಂಗಳವಾರ ಬಸ್ತಿಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಬಸ್ತಿಪುರ ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ಜಾಗೃತಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಜನರು ಹೊಸದಾಗಿ ಕ್ಯಾನ್ಸರ್ ರೋಗಿಗಳ ಸಾಲಿಗೆ ಸೇರುತ್ತಿದ್ದಾರೆ. ಅನಾರೋಗ್ಯಕರ ಜೀವನ ಶೈಲಿಯಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಕೆಲವೊಂದು ರೋಗ ವೈದ್ಯ ಲೋಕಕ್ಕೆ ಸವಾಲಾಗಿವೆ. ಮನುಷ್ಯ ಆಧುನಿಕನಾದಂತೆ ಆತನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಹಾಳಾಗುತ್ತಿದೆ. ಆಹಾರ ಕ್ರಮದ ಬದಲಾವಣೆ, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ ಹಾಗೂ ಮಾನಸಿಕ ಒತ್ತಡದಿಂದ ರೋಗಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಾತನಾಡಿ, ತಂಬಾಕು, ಮದ್ಯಪಾನದಿಂದ ದೂರವಿರುವುದು, ಶಿಸ್ತು ಬದ್ಧ ಜೀವನಶೈಲಿ, ಪೌಷ್ಟಿಕ ಆಹಾರ ಸೇವನೆ, ವೈಯಕ್ತಿಕ ಶುಚಿತ್ವ, ಆರೋಗ್ಯಕರ ಅಭ್ಯಾಸ, ಪ್ರತಿನಿತ್ಯ ವ್ಯಾಯಾಮ, ದೈಹಿಕವಾಗಿ ಸದಾ ಚಟುವಟಿಕೆಯಿಂದ ಇದ್ದರೆ ಇಂಥ ರೋಗಗಳಿಂದ ದೂರ ಇರಬಹುದೆಂದು ಕಿವಿಮಾತು ಹೇಳಿದರು.

ಸಮುದಾಯ ಆರೋಗ್ಯ ಅಧಿಕಾರಿ ಅರುಣಾಕ್ಷಿ ಮಾತನಾಡಿ, ಹೆಂಗಸರಲ್ಲಿ ಗರ್ಭಕಂಠದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಸ್ವಯಂ ಪರೀಕ್ಷೆ ಮಾಡಿಕೊಳ್ಳಿ. ಏನಾದರು ತೊಂದರೆ ಇದ್ದಲ್ಲಿ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಿ. ಕ್ಯಾನ್ಸರನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಗುಣಮುಖವಾಗಬಹುದು. ಕ್ಯಾನ್ಸರ್‌ಗೆ ಭಯಪಡುವ ಅವಶ್ಯಕತೆ ಇಲ್ಲ. ಆದರೆ ನಿರಂತರ ವೈದ್ಯಕೀಯ ತಪಾಸಣೆ ಅತ್ಯಗತ್ಯ ಎಂದು ತಿಳಿಸಿದರು.

ಮುಖಂಡರಾದ ಶಿವಣ್ಣ, ಆಶಾ ಕಾರ್ಯಕರ್ತೆ ಶಿವಕನ್ಯೆ, ಲೀಲಾವತಿ ಹಾಗೂ ಮಕ್ಕಳ ತಾಯಂದಿರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net