ಬೆಂಗಳೂರಿನ ಮಹಿಳೆಯರಲ್ಲಿ ಕ್ಯಾನ್ಸರ್ ಅಧಿಕ

Cancer
Published on

ಬೆಂಗಳೂರು: ಬೆಂಗಳೂರಿನ ಮಹಿಳೆಯರಲ್ಲಿ ಕ್ಯಾನ್ಸರ್ ವ್ಯಾಪಕವಾಗಿ ಹೆಚ್ಚುತ್ತಿದ್ದು, ದೇಶದಲ್ಲಿ ಅತೀ ಹೆಚ್ಚು ಸ್ತನ ಕ್ಯಾನ್ಸರ್ ರೋಗಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಮತ್ತು ಮರಣಗಳ ಕುರಿತು ನಡೆಸಲಾಗಿರುವ ಸಮಗ್ರ ವಿಶ್ಲೇಷಣೆಯಿಂದ ಈ ಮಾಹಿತಿ ಬಹಿರಂಗಗೊಂಡಿದೆ.

ಗರ್ಭಕಂಠ ಮತ್ತು ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಬೆಂಗಳೂರಿನ ಮಹಿಳೆಯರು ಮೊದಲ ಹತ್ತು ಸ್ಥಾನಗಳಲ್ಲಿದ್ದಾರೆ. ಬೆಂಗಳೂರು, ದೆಹಲಿ, ಚೆನ್ನೈ, ತಿರುವನಂತಪುರ ಸೇರಿ ಮಹಾನಗರಗಳ ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚು ವರದಿಯಾಗಿವೆ ಎಂದು ಭಾರತದ ಕ್ಯಾನ್ಸರ್ ನೋಂದಣಿಗಳ ದತ್ತಾಂಶದಿಂದ ತಿಳಿದುಬಂದಿದೆ.

ಭಾರತದಲ್ಲಿ 2024ರಲ್ಲಿ ಅಂದಾಜು 15.62 ಲಕ್ಷ ಕ್ಯಾನ್ಸರ್ ಪ್ರಕರಣ ವರದಿಯಾಗಿದ್ದು, 8.74 ಲಕ್ಷಕ್ಕೂ ಅಧಿಕ ಸಾವು ಸಂಭವಿಸಿವೆ. 2022ಕ್ಕೆ (14.6 ಲಕ್ಷ) ಹೋಲಿಸಿದರೆ ವ್ಯಾಪಕವಾಗಿ ಹೆಚ್ಚುತ್ತಿದೆ. ಮಿಜೋರಾಂ ರಾಜಧಾನಿ ಐಜ್ವಾಲ್‌ನಲ್ಲಿ ಪ್ರತಿ ಒಂದು ಲಕ್ಷ ಪುರುಷರಲ್ಲಿ 257ಕ್ಕೂ ಅಧಿಕ ಮತ್ತು ಒಂದು ಲಕ್ಷ ಮಹಿಳೆಯರಲ್ಲಿ 245ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ಮೂಲಕ ಅಗ್ರ ಸ್ಥಾನದಲ್ಲಿದೆ.

ಐಸಿಎಂಆರ್ ವಿಶ್ಲೇಷಣೆ:

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿಶ್ಲೇಷಣೆ ಪ್ರಕಾರ, ಬೆಂಗಳೂರಿನಲ್ಲಿ ಒಂದು ಲಕ್ಷ ಪುರುಷರಲ್ಲಿ 125 ಹಾಗೂ ಲಕ್ಷ ಮಹಿಳೆಯರಲ್ಲಿ 140 ಪ್ರಕರಣಗಳು ವರದಿಯಾಗುತ್ತಿವೆ. ಮಹಿಳೆಯರ ಕ್ಯಾನ್ಸರ್ ಪ್ರಕರಣಗಳಲ್ಲಿ ಬೆಂಗಳೂರು 6ನೇ ಸ್ಥಾನದಲ್ಲಿದೆ.

ಐಸಿಎಂಆರ್‌ನ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ತನಿಖಾಧಿಕಾರಿ ಗುಂಪು 2015, 2019ರ ನಡುವೆ ಪ್ರಕರಣಗಳು ಮತ್ತು ಪ್ರವೃತ್ತಿಗಳನ್ನು ತಿಳಿಯಲು ಜನಸಂಖ್ಯಾ ಆಧಾರಿತ 43 ಕ್ಯಾನ್ಸರ್ ನೋಂದಣಿ ದತ್ತಾಂಶ ಬಳಸಿದೆ. ಈ ನೋಂದಣಿಗಳಲ್ಲಿ 33 ಐಸಿಎಂಆರ್‌ನ ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರದಿಂದ ನಿರ್ವಹಿಸಲ್ಪಡುತ್ತವೆ. 9 ಟಾಟಾ ಸ್ಮಾರಕ ಕೇಂದ್ರದಿಂದ ಹಾಗೂ ಒಂದು ತಮಿಳುನಾಡು ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದಡಿ ನಿರ್ವಹಿಸಲಾಗುತ್ತಿದೆ.

ಹೆಚ್ಚಿರುವ ಪ್ರದೇಶಗಳು

ಈಶಾನ್ಯದ ಐಜ್ವಾಲ್, ಪೂರ್ವ ಖಾಸಿ ಹಿಲ್ಸ್, ಪಾಪುಂಪರೆ, ಕಾಮರೂಪ ಅರ್ಬನ್ ಮತ್ತು ಮಿಜೊರಾಂಗಳಲ್ಲಿ ಕ್ಯಾನ್ಸರ್‌ನ ಪ್ರಮಾಣ ಹೆಚ್ಚು ದಾಖಲಾಗಿದೆ ಮತ್ತು ಅನ್ನನಾಳದ ಕ್ಯಾನ್ಸರ್ ಪ್ರಚಲಿತವಾಗಿದೆ ಎಂದು ಹೊಸ ಸಂಶೋಧನೆಗಳು ಸೂಚಿಸಿವೆ. ಕೇರಳ, ಕಾಶ್ಮೀರ ಹೆಚ್ಚಿನ ಕ್ಯಾನ್ಸರ್ ಹೊಂದಿರುವ ಪ್ರದೇಶಗಳಾಗಿವೆ. ಮಹಾರಾಷ್ಟ್ರದ ಗ್ರಾಮೀಣ ಪ್ರದೇಶ ಬಾರ್ಶಿಗಿಂತ ದೆಹಲಿಯಲ್ಲಿ ಮೂರು ಪಟ್ಟು ಹೆಚ್ಚಿನ ಪ್ರಮಾಣ (ಪುರುಷರಿಗೆ 146.7)ದಲ್ಲಿ ಪ್ರಕರಣಗಳು ವರದಿಯಾಗಿದೆ. ಶ್ರೀನಗರದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅತಿ ಹೆಚ್ಚು ದಾಖಲಾಗಿದೆ. ಇದು ಭಾರತದಲ್ಲಿ ಪ್ರಾದೇಶಿಕ ಅಸಮಾನತೆಗಳು ಮತ್ತು ಹೆಚ್ಚುತ್ತಿರುವ ಕ್ಯಾನ್ಸರ್ ಹೊರೆಯನ್ನು ಸಾಕ್ಷೀಕರಿಸುತ್ತದೆ.

ನಿಯಂತ್ರಣಕ್ಕೆ ನೀತಿ

ಕ್ಯಾನ್ಸರ್ ನಿಯಂತ್ರಿಸಲು ಸಂಪನ್ಮೂಲ ಹಂಚಿಕೆ ಹೆಚ್ಚಿಸುವ ಹಾಗೂ ರಾಷ್ಟ್ರವ್ಯಾಪಿ ಕ್ಯಾನ್ಸರ್ ತಡೆಗಟ್ಟಲು ತಂತ್ರಗಳನ್ನು ಬಲಪಡಿಸಲು ನೀತಿ ನಿರೂಪಕರಿಗೆ ಈ ಸಂಶೋಧನೆಗಳು ಪ್ರಮುಖ ಒಳನೋಟಗಳನ್ನು ಒದಗಿಸುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ 2ನೇ ಸ್ಥಾನ

ಭಾರತವು ಏಷ್ಯಾದಲ್ಲಿ ಎರಡು ಮತ್ತು ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಭಾರತೀಯರು ಜೀವಿತಾವಧಿಯಲ್ಲಿ ಕ್ಯಾನ್ಸರ್ ಹೊಂದುವ ಸಾಧ್ಯತೆ ಶೇ.11 ಆಗಿದೆ. ಜಾಗತಿಕ ಕ್ಯಾನ್ಸರ್ ವೀಕ್ಷಣಾಲಯವು 2045ರ ವೇಳೆಗೆ ಭಾರತದಲ್ಲಿ ಕ್ಯಾನ್ಸರ್ ಸಂಭವಿಸುವಿಕೆಯು ಸುಮಾರು 25 ಲಕ್ಷ ಪ್ರಕರಣಗಳಿಗೆ ಹೆಚ್ಚಾಗುತ್ತದೆ ಎಂದು ಅಂದಾಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net