ಅನಕ್ಷರಸ್ಥರಾದವರು ಪತ್ರ ಬರೆಯಲು ಸಾಧ್ಯವೇ?

30Goa2
Published on

ಪಣಜಿ: ವಾಸ್ಕೋದ ಜುವಾರಿನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಮೂವರು ಕನ್ನಡ ಭಾಷೆಯಲ್ಲಿ ಬರೆದ ಪತ್ರವೊಂದು ಘಟನಾ ಸ್ಥಳದಲ್ಲಿ ಸಿಕ್ಕಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಅವರಿಗೆ ಓದಲು, ಬರೆಯಲು ಬರುತ್ತಿರಲಿಲ್ಲ. ಅವರು ಅನಕ್ಷರಸ್ಥರಾಗಿದ್ದರು. ಅದು ಹೇಗೆ ಪತ್ರ ಬರೆಯಲು ಸಾಧ್ಯ ಎಂದು ಮೃತರ ಸಂಬಂಧಿಕರು ಹೇಳುತ್ತಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.
ಜುವಾರಿನಗರ ಬಿರ್ಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹುಲಗೆಪ್ಪ ಅಂಬಿಗೇರ (35), ಈತನ ಸಹೋದರ ಗಂಗಪ್ಪ ಅಂಬಿಗೇರ (29) ಹಾಗೂ ಹುಲಗೆಪ್ಪನ ಪತ್ನಿ ದೇವಮ್ಮಾ ಅಂಬಿಗೇರ ( 28) ಮುದ್ದೇಬಿಹಾಳ ತಾಲೂಕಿನ ನಾಲತವಾಡ ಬಳಿಯ ಸುಲ್ತಾನಪುರ ಗ್ರಾಮದವರು. ಈ ಮೂವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕನ್ನಡ ಭಾಷೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಕ್ಕೆ ಸಂಬಂಧಿಸಿದ ಪತ್ರ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಆದರೆ, ಅದನ್ನು ತಳ್ಳಿ ಹಾಕಿರುವ ಮೃತರ ಸಂಬಂಧಿಕರು ಈ ಪತ್ರವು ಸ್ಥಳ ಪಂಚನಾಮೆ ಮಾಡುವ ಸಂದರ್ಭದಲ್ಲಿ ಏಕೆ ಸಿಗಲಿಲ್ಲ, ನಂತರ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ.
ವಾಸ್ಕೋ ಜುವಾರಿ ನಗರದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರು ನಡೆಸಿದ್ದ ಹಲ್ಲೆ ಮತ್ತು ಒತ್ತಡದಿಂದಾಗಿ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಪ್ರಕರಣವನ್ನು ಪ್ರತ್ಯೇಕ ತನಿಖಾ ತಂಡ ರಚಿಸಿ ಸೂಕ್ತ ತನಿಖೆ ನಡೆಸಬೇಕು ಮತ್ತು ಈ ಘಟನೆಯಲ್ಲಿ ಶಾಮೀಲಾಗಿರುವ ಪೊಲೀಸರನ್ನು ಕೂಡಲೆ ಸಸ್ಪೆಂಡ್ ಮಾಡಬೇಕು. ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮರಾ ಫುಟೇಜ್ ತ್ವರಿತವಾಗಿ ಪರಿಶೀಲನೆ ನಡೆಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net