ಗ್ರಾಮಾಂತರದಲ್ಲಿ ಅರಳುವುದೇ ಕಮಲ?

Published on

ಪುನರ್ವಿಂಗಡಣೆ ನಂತರ ಕಾಂಗ್ರೆಸ್ ಪಾರುಪತ್ಯ ಮೈತ್ರಿ ಪಾಲನೆ ಆದರಷ್ಟೇ ಗೆಲುವಿನ ನಿರೀಕ್ಷೆ


ಗಂಗಾಧರ್ ಬೈರಾಪಟ್ಟಣ ರಾಮನಗರ


ಜಿದ್ದಾಜಿದ್ದಿನ ಹೋರಾಟದ ಕ್ಷೇತ್ರವಾಗಿ ಪರಿಣಮಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯಾದರೂ ಬಿಜೆಪಿಗೆ ಒಲಿಯುವುದೇ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.


2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಂತರ ಕನಕಪುರದಿಂದ ಬೆಂಗಳೂರು ಗ್ರಾಮಾಂತರವಾಗಿ ಬದಲಾವಣೆ ಆದಾಗಿನಿಂದಲೂ ಒಮ್ಮೆಯೂ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿಲ್ಲ. ಈಗ ಮೋದಿ ಅಲೆ ಮತ್ತು ರಾಮ ಮಂದಿರ ನಿರ್ಮಾಣದ ಬಲದೊಂದಿಗೆ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ಮಾಡಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ವಿರುದ್ಧ ಅವರು ಸೆಣೆಸಬೇಕಿದ್ದು, ಈ ಬಾರಿಯಾದರೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದೇ ಎನ್ನುವ ಚರ್ಚೆ ಜೋರಾಗಿದೆ.

ಕಮಲ ಅರಳಲಿಲ್ಲ


ಕ್ಷೇತ್ರ ಪುನರ್ವಿಂಗಡಣೆ ನಂತರ 2009ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ನಂತರ ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಚುನಾವಣೆ ಎದುರಿಸಿದ ಡಿ.ಕೆ.ಸುರೇಶ್ ಗೆಲುವು ಸಾಧಿಸುವ ಮೂಲಕ ನಂತರ ನಡೆದ 2014, 2019ರ ಲೋಕಸಭೆ ಚುನಾವಣೆಗಳನ್ನು ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಆದರೆ ಇಲ್ಲಿನ ವಿಶೇಷವೆಂದರೆ ಪ್ರತಿ ಬಾರಿಯೂ ಎರಡನೇ ಸ್ಥಾನ ಪಡೆದುಕೊಂಡಿರುವುದು ಬಿಜೆಪಿ.

ಮೈತ್ರಿ ನಡೆಯುವುದೇ?

DR Manjunath

2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜತೆಗೆ ಸ್ನೇಹ ಬೆಳೆಸಿದೆ. ಆದರೆ, 2019ರ ಚುನಾವಣೆಯಲ್ಲಿ ಜೆಡಿಎಸ್ - ಕಾಂಗ್ರೆಸ್ ನಡುವಿನ ಮೈತ್ರಿ ಸರಿಯಾಗಿ ಕೆಲಸ ಮಾಡಲಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗಿತ್ತು. ಬಹುತೇಕ ಕಾಂಗ್ರೆಸ್ ವಿರುದ್ಧವೇ ರಾಜಕಾರಣ ಮಾಡಿಕೊಂಡು ಬಂದಿರುವ ಜೆಡಿಎಸ್ ಕಾರ್ಯಕರ್ತರು ಡಿ.ಕೆ.ಸುರೇಶ್ ಅವರಿಗೆ ಮತ ಹಾಕಲು ಹಿಂದೇಟು ಹಾಕಿದ್ದು, ಫಲಿತಾಂಶದಲ್ಲಿ ವ್ಯಕ್ತವಾಯಿತು.


ಇದರ ಪರಿಣಾಮ ಸುಮಾರು 5 ಲಕ್ಷ ಮತಗಳ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದ ಡಿ.ಕೆ.ಸುರೇಶ್ ಅವರಿಗೆ ದಕ್ಕಿದ್ದು 2.06 ಲಕ್ಷ ಮತಗಳ ಅಂತರದ ವಿಜಯ. ಆದರೆ, ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಡಿ.ಕೆ.ಸುರೇಶ್ ಈಗ ಜೆಡಿಎಸ್ ಪಾಲಿಗೆ ಎದುರಾಳಿ. ಮಂಜುನಾಥ್ ಇವರ ಪ್ರತಿ ಸ್ಪರ್ಧಿ ಆಗಿರುವ ಕಾರಣ ಮೈತ್ರಿ ಕೆಲಸ ಮಾಡುತ್ತದೆ ಎನ್ನಲಾಗಿದೆ. ಒಂದು ವೇಳೆ ಮೈತ್ರಿ ಕೆಲಸ ಮಾಡಿದ್ದೇ ಆದರೆ ಡಿ.ಕೆ.ಸುರೇಶ್ ಅವರಿಗೆ ಗೆಲುವು ತುಸು ಕಷ್ಟವಾಗಲಿದೆ.

ವಿಧಾನಸಭೆ ಫಲಿತಾಂಶದ ಅವಲೋಕನ


ಕಳೆದ ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶ ಅವಲೋಕಿಸಿದಾಗ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಒಟ್ಟಾರೆ ಮತಗಳಿಗೆ ಕಾಂಗ್ರೆಸ್‌ಗಿಂತ ಹೆಚ್ಚೇ ಇದೆ. 8 ವಿಧಾನಸಭೆ ಕೇತ್ರಗಳಲ್ಲಿ ಆನೇಕಲ್ ಮತ್ತು ಕನಕಪುರ ಹೊರತುಪಡಿಸಿ ಉಳಿದ 6 ಕ್ಷೇತ್ರಗಳ ಬಿಜೆಪಿ - ಜೆಡಿಎಸ್ ಒಟ್ಟಾರೆ ಮತಗಳಿಗೆ ಕಾಂಗ್ರೆಸ್‌ಗಿಂತ ಹೆಚ್ಚೆ ಇದೆ.


8 ಕ್ಷೇತ್ರಗಳಲ್ಲಿ ಕಾಂಗ್ರೆಸ್ 812917 ಮತ ಗಳಿಸಿದ್ದರೆ ಬಿಜೆಪಿ - ಜೆಡಿಎಸ್‌ನ ಅಭ್ಯರ್ಥಿಗಳು 972167 ಮತತ ಪಡೆದಿದ್ದಾರೆ. ಕಾಂಗ್ರೆಸ್‌ಗಿಂತ 1.59 ಲಕ್ಷ ಮತಗಳು ಹೆಚ್ಚು ಪಡೆದಿವೆ. ಆದರೆ ಲೋಕಸಭೆ ಚುಣಾವಣೆ ಕಾರ್ಯತಂತ್ರವೇ ಬೇರೆ ಇರುವ ಕಾರಣ ಫಲಿತಾಂಶ ಏರು ಪೇರಾಗುವ ಸಾಧ್ಯತೆ ಇದೆ.


2023ರ ವಿಧಾನಸಭೆ ಚುನಾವಣೆ ಪಕ್ಷಗಳ ಮತ ಗಳಿಕೆ
     ಕ್ಷೇತ್ರ          ಬಿಜೆಪಿ      ಜೆಡಿಎಸ್    ಕಾಂಗ್ರೆಸ್
ಬೆಂಗಳೂರು (ದ) 196220  24612    146521
ಆರ್ ಆರ್ ನಗರ  127980   7795     116138
ಆನೇಕಲ್         103472   6415     134797
ಕುಣಿಗಲ್           48151  46974      74724
ರಾಮನಗರ         12912  76975     87690
ಮಾಗಡಿ            20197   82811     94650
ಕನಕಪುರ           19075   20631    143023
ಚನ್ನಪಟ್ಟಣ          80677   96592     15374
ಒಟ್ಟು              609362 362805    812917

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net