

ಬನ್ನೂರು: ಪಟ್ಟಣದ ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀ ಗೌರಿದೇವಿ , ಲಯನ್ಸ್ ಕ್ಲಬ್ ಆಫ್ ಈರೋಡ್ ಸುಪ್ರಿಮ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ಶಿಬಿರಾರ್ಥಿಗಳು ಯಶಸ್ವಿಯಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮಂಗಳವಾರ ಪಟ್ಟಣಕ್ಕೆ ವಾಪಸ್ಸಾದರು.
ಈ ವೇಳೆ ಮಾತನಾಡಿದ ಶಿಬಿರಾರ್ಥಿಗಳು, ಕಣ್ಣು ಕಾಣದೆ ಹಲವಾರು ವರ್ಷಗಳಿಂದ ವಿವಿಧ ಸಮಸ್ಯೆಗಳಿಂದ ಕತ್ತಲೆಯಲ್ಲಿಯೇ ಜೀವನ ಸಾಗಿಸಿ, ನರಕದ ದರ್ಶನವಾದಂತೆ ಆಗಿತ್ತು. ಅದರೆ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ಅವರು ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ನಮ್ಮ ಕಣ್ಣನ್ನು ನುರಿತ ವೈದ್ಯರಿಗೆ ತೋರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿಗೆ ಕಳುಹಿಸಿ, ಶಸ್ತ್ರಚಿಕಿತ್ಸೆ ಮಾಡಿಸಿ ಕಣ್ಣಿನ ದೃಷ್ಟಿ ನೀಡಿದ್ದಾರೆ ಎಂದು ತಿಳಿಸಿದರು.
ಸಮಾಜ ಸೇವಕ ಡಾ.ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಣ್ಣಿನ ಸಮಸ್ಯೆ ಇರುವವರು ನಗರ ಪ್ರದೇಶದಲ್ಲಿ ಹೋಗಿ ಚಿಕಿತ್ಸೆ ಪಡೆಯಲಾರದೆ ತುಂಬ ಕಷ್ಟದಲ್ಲಿ ಜೀವನ ಕಳೆಯುತ್ತಾರೆ ಎನ್ನುವುದನ್ನು ಮನಗಂಡು ಗ್ರಾಮೀಣ ಭಾಗದ ಜನರಿಗೆ ಈ ಶಿಬಿರ ಸದುಪಯೋಗವಾಗಬೇಕು ಎಂದು ಉಚಿತ ಕಣ್ಣಿನ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಳಿಕ ಶಿಬಿರಾರ್ಥಿಗಳಿಗೆ ಹಣ್ಣುಹಂಪಲು ನೀಡಿ ಸ್ವಾಗತಿಸಿದರು. ಯಾಸೀನ್, ನಾರಾಯಣ, ವನ್ಯಾ, ವಿರಾಟ್, ಸಂತೋಷ್‌ಕುಮಾರಿ,ನಂಜುಂಡಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.