

ಹನೂರು: ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದಲ್ಲಿ ಬುಧವಾರ ಚರ್ಮಗಂಟು ರೋಗದಿಂದ ಕರುವೊಂದು ಮೃತಪಟ್ಟಿದೆ.
ತಿಂಗಳ ಹಿಂದೆ ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡು 6 ಹಸುಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜತೆಗೆ ಕುರಟ್ಟಿ ಹೊಸೂರು ಸೇರಿದಂತೆ ತಾಲೂಕಿನಾದ್ಯಂತ ಜಾನುವಾರುಗಳಿಗೆ ಚರ್ಮಗಂಟು ರೋಗ ತಗುಲದಂತೆ ಲಸಿಕೆ ನೀಡಲಾಗಿತ್ತು. ಆದರೂ ವಾರದ ಹಿಂದೆ ಗೇರಟ್ಟಿ ಗ್ರಾಮದ ಚಂದ್ರಪ್ಪ ಅವರ ಕರುವಿನಲ್ಲಿ ಕಾಣಿಸಿಕೊಂಡಿದ್ದ ಚರ್ಮಗಂಟಿನ ರೋಗಕ್ಕೆ ಲಸಿಕೆ ನೀಡಲಾಗಿದ್ದರೂ ಬುಧವಾರ ಮಧ್ಯಾಹ್ನ ಮೃತಪಟ್ಟಿದೆ. ಆದ್ದರಿಂದ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಕ್ಕೆ ಭೇಟಿ ನೀಡಿ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಚಂದ್ರಪ್ಪ ಒತ್ತಾಯಿಸಿದ್ದಾರೆ.
ಈ ಸಂಬಂಧ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು ಅವರು ವಿಜಯವಾಣಿಯೊಂದಿಗೆ ಮಾತನಾಡಿ, ಗೇರಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ನೀಡಲಾಗಿತ್ತು. ಆದರೆ ಕರುವೊಂದು ಮೃತಪಟ್ಟಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.