

ಹನುಮಸಾಗರ: ಸಮೀಪದ ಕ್ಯಾದಿಗುಪ್ಪ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮುನಿರಾಬಾದನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರೌಢ ಶಾಲೆಗಳ 2023-24ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸುಮಾರು 54 ಮಾದರಿಗಳು ಭಾಗವಹಿಸಿದ್ದವು.
ಅದರಲ್ಲಿ ಕ್ಯಾದಿಗುಪ್ಪ ಪ್ರೌಢ ಶಾಲೆಯ ವರ್ಷಾ ಶಿವನಗುತ್ತಿ, ಯಮುನಾ ಧನ್ನೂರ ಪ್ರದರ್ಶಿಸಿದ ಪರಿಸರ ವಿಜ್ಞಾನ ವಿಷಯದಲ್ಲಿ ನೈಸರ್ಗಿಕ ಸೊಳ್ಳೆಯ ನಿಯಂತ್ರಣ ಮಾದರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿನಿಯರನ್ನು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಸವರಾಜ ವಾಲಿಕಾರ, ಡಯಟ್ ಉಪನ್ಯಾಸಕರಾದ ರಾಜೇಂದ್ರ ಬೆಳ್ಳಿ, ಮಹಾಂತೇಶ್ ಅರಳಿ, ಶಾಲೆಯ ಮುಖ್ಯ ಶಿಕ್ಷಕ, ಶಿಕ್ಷಕರು, ಎಸ್ಡಿಎಂಸಿ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.