ಸಚಿವ ಸಂಪುಟ ಸಭೆ ಜಿಲ್ಲೆಯ ಅಭಿವೃದ್ಧಿಗೆ ವರದಾನ

ಸಚಿವ ಸಂಪುಟ ಸಭೆ ಜಿಲ್ಲೆಯ ಅಭಿವೃದ್ಧಿಗೆ ವರದಾನ
Published on

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಆಯೋಜಿಸಿರುವುದು ಜಿಲ್ಲೆಯ ಅಭಿವೃದ್ಧಿಗೆ ವರದಾನವಾಗಲಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ಹೇಳಿದರು.

ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆರ್.ಎಸ್. ದೊಡ್ಡಿಯಲ್ಲಿ ಸೋಮವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿವತಿಯಿಂದ ಅಮೃತ್ 2.0 ಯೋಜನೆಯಡಿ ಸುಧಾರಿತ ನೀರು ಸರಬರಾಜು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಂಜುಂಡಪ್ಪ ವರದಿಯ ಪ್ರಕಾರ ಚಾಮರಾಜನಗರ ಹಿಂದುಳಿದ ಜಿಲ್ಲೆಯಾಗಿದೆ. ಹಾಗಾಗಿ ಜಿಲ್ಲೆ ಅಭಿವೃದ್ಧಿಯಾಗಬೇಕಿದೆ. ಆದರೆ, ಸರ್ಕಾರದಿಂದ ಅಭಿವೃದ್ಧಿಗೆ ಈವರೆಗೂ ವಿಶೇಷ ಪ್ಯಾಕೇಜ್ ಘೋಷಣೆಯಾಗಿಲ್ಲ. ಆದ್ದರಿಂದ ಇದೀಗ ಮ.ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಆಯೋಜಿಸಿರುವುದರಿಂದ ಹನೂರು ಸೇರಿದಂತೆ ಜಿಲ್ಲೆಯೂ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಈ ದಿಸೆಯಲ್ಲಿ ತಾಲೂಕಿನಲ್ಲಿ ಆಗಬೇಕಿರುವ ಅಗತ್ಯ ಮೂಲಸೌಕರ್ಯಗಳ ಜತೆಗೆ ತಾಲೂಕಿನ ವಿವಿಧ ಇಲಾಖೆಯ ಕಚೇರಿಗಳ ಸ್ಥಾಪನೆ, ನೀರಾವರಿ ಸೌಕರ್ಯ, ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಅನೇಕ ಸೌಕರ್ಯಗಳ ಬಗ್ಗೆ ಈಗಾಗಲೇ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಸಭೆಯಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತಂದು ವಿಶೇಷ ಅನುದಾನದ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸಿದ್ದು ನಿವಾಸ್ ಯೋಜನೆ ಜಾರಿಗೆ ಪ್ರಯತ್ನ: ಈವರೆಗೂ ಮ.ಬೆಟ್ಟದ ತಪ್ಪಲಿನ ಗ್ರಾಮಗಳು ಹಾಗೂ ಸೋಲಿಗರ ಹಾಡಿಗಳಿಗೆ ಸಮರ್ಪಕ ರಸ್ತೆ ಹಾಗೂ ವಿದ್ಯುತ್ ಸೌಕರ್ಯ ಒದಗಿಸಲು ಸಾಧ್ಯವಾಗಿರಲಿಲ್ಲ. ಆದರೀಗ ಕಾಡಂಚಿನ ಈ ಗ್ರಾಮಗಳಿಗೆ ವಿದ್ಯುತ್ ಹಾಗೂ ರಸ್ತೆ ಸೌಕರ್ಯ ಒದಗಿಸುವ ಕೆಲಸವಾಗುತ್ತಿದೆ. ಜತೆಗೆ 10 ಸಾವಿರ ಮನೆ ಮಂಜೂರು ಮಾಡುವಂತೆ ವಸತಿ ಸಚಿವರಲ್ಲಿ ಮನವಿ ಮಾಡಲಾಗಿದೆ. ಜತೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಲಿಗರಿದ್ದು, ಕೆಲವರು ಮನೆಯಿಲ್ಲದೇ ಕಷ್ಟದ ನಡುವೆಯೇ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಸೋಲಿಗರಿಗೆ ಸಿದ್ದು ನಿವಾಸ್ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ 3 ಸಾವಿರ ಮನೆಗಳು ಮಂಜೂರಾಗುವ ಪ್ರಯತ್ನಗಳು ನಡೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸೋಲಿಗರ ಬದುಕು ಹಸನಾಗಲಿದೆ ಎಂದರು.

ಯುಜಿಡಿ ಯೋಜನೆ ಅನುಷ್ಟಾನಕ್ಕೆ ಪ್ರಸ್ತಾವನೆ: ಹನೂರು ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಆದರೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರತಿ ಮನೆಗೂ ನೀರನ್ನು ಒದಗಿಸುವ ಉದ್ದೇಶದಿಂದ ಅಮೃತ್ 2.0 ಯೋಜನೆಯಡಿ ಸುಧಾರಿತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಕೈಗೊಂಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯು 45 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಸದ್ಯ ಸರ್ಕಾರದಿಂದ ದೊರೆತಿರುವ 6 ಕೋಟಿ ರೂ. ವಚ್ಚದಲ್ಲಿ ಪ್ರಥಮ ಹಂತದಲ್ಲಿ 13 ಕಿ.ಮೀವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಆರ್.ಎಸ್. ದೊಡ್ಡಿಗೆ ಸಮರ್ಪಕ ಕುಡಿಯುವ ನೀರನ್ನು ಪೂರೈಸಲಾಗುವುದು. ಉಳಿಕೆ ಅನುದಾನ ಬಿಡೆಗಡೆಯಾದ ಬಳಿಕ ಈ ಯೋಜನೆಯನ್ನು ಹನೂರಿಗೆ ವಿಸ್ತರಿಸಲಾಗುವುದು. ಜತೆಗೆ ಒಳಚರಂಡಿ ಯೋಜನೆ ಅನುಷ್ಟಾನಕ್ಕೆ ಈಗಾಗಲೇ ಸರ್ವೆಕಾರ್ಯ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಾರ್ಡ್‌ಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನವಾಗುತ್ತಿದೆ ಎಂದು ತಿಳಿಸಿದರು.

ಪ.ಪಂ.ಅಧ್ಯಕ್ಷೆ ಮಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್‌ಕುಮಾರ್, ಸದಸ್ಯ ಮಹೇಶ್, ಲತಾಮಣಿ, ಹರೀಶ್‌ಕುಮಾರ್, ಮುಖ್ಯಾಧಿಕಾರಿ ಅಶೋಕ್, ಮುಖಂಡ ಮಂಜೇಶ್, ರಾಜುಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net