ರೈತರು ಬೆಳೆದ ಕ್ಯಾಬೀಜ್ ಈಗ ಕುರಿ ಪಾಲು!

1-RNR-03
Published on

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

ಜಿಲ್ಲೆಯ ರಾಣೆಬೆನ್ನೂರ, ಬ್ಯಾಡಗಿ, ಹಿರೇಕೆರೂರ ಭಾಗದಲ್ಲಿ ಕ್ಯಾಬೀಜ್ ಬೆಳೆದ ರೈತರೀಗ ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.

ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ಲಾಕ್​ಡೌನ್ ಘೊಷಣೆ ಮಾಡಿದ್ದರಿಂದ ಗೋಬಿ ಮಂಚೂರಿ, ಫ್ರೖೆಡ್ ರೈಸ್, ನ್ಯೂಡಲ್ಸ್ ಸೇರಿ ಚಾಟ್ಸ್ ಫುಡ್ ಬಂದ್ ಆಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಕ್ಯಾಬೀಜ್ ಕೊಳ್ಳುವವರೇ ಇಲ್ಲದಂತಾಗಿದೆ. ರೈತರು ಬೆಳೆ ಮಾರಾಟವಾಗದ ಕಾರಣ ಜಮೀನಿನಲ್ಲಿಯೇ ಕುರಿ, ಮೇಕೆ ಮೇಯಲು ಬಿಟ್ಟಿದ್ದಾರೆ.

ಮೂರು ತಾಲೂಕುಗಳಲ್ಲಿ 3 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ನೀರಾವರಿ ಮಾಡಿಕೊಂಡು ರೈತರು ಕ್ಯಾಬೀಜ್ ಬೆಳೆಯುತ್ತ ಬಂದಿದ್ದಾರೆ. ಮಹಾರಾಷ್ಟ್ರದಲ್ಲಿ ಕ್ಯಾಬೀಜ್​ಗೆ ಹೆಚ್ಚಿನ ಬೇಡಿಕೆಯಿರುವ ಕಾರಣ ಅಲ್ಲಿಂದಲೇ ವ್ಯಾಪಾರಸ್ಥರು ನೇರವಾಗಿ ರೈತರ ಜಮೀನಿಗೆ ಬಂದು ಖರೀದಿ ಮಾಡುತ್ತಿದ್ದರು. ಆದರೀಗ ಕರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಖರೀದಿಗೆ ಯಾರೊಬ್ಬರು ಬರುತ್ತಿಲ್ಲ. ಹೀಗಾಗಿ ಕ್ಯಾಬೀಜ್ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.

ಕ್ಯಾಬೀಜ್ ಬೀಜ 10 ಗ್ರಾಂಗೆ 380ರಿಂದ 450 ರೂ. ಇದೆ. 1 ಎಕರೆಗೆ 10 ಗ್ರಾಂ ತೂಕದ 20 ಪ್ಯಾಕೇಟ್ ಬೀಜ ಬೇಕು. ಗೊಬ್ಬರ, ಔಷಧ, ಕೂಲಿ ಕಾರ್ವಿುಕರ ಖರ್ಚು ಹಾಗೂ ನೀರು ಹಾಯಿಸುವುದು ಸೇರಿ 1 ಎಕರೆಗೆ 25ರಿಂದ 30 ಸಾವಿರ ರೂ. ಖರ್ಚು ಆಗುತ್ತದೆ. ಇದರ ಜತೆಗೆ ನಿರ್ವಹಣೆ ಕೂಡ ಕಷ್ಟವೇ. ಆದರೂ ರೈತರು ಸಾಲ ಮಾಡಿ ಕ್ಯಾಬೀಜ್ ಬೆಳೆದಿದ್ದಾರೆ. ಬೆಳೆ ಕೂಡ ಉತ್ತಮವಾಗಿಯೇ ಬಂದಿದೆ. ಆದರೆ, ಕರೊನಾ ಸಂಬಂಧ ಖರೀದಿಸುವವರಿಲ್ಲದೇ ರೈತರು ನಷ್ಟ ಅನುಭವಿಸುವಂತಾಗಿದೆ.

ಕ್ಯಾಬೀಜ್ ಉತ್ತಮವಾಗಿ ಬೆಳೆದಿದೆ. ಆದರೆ, ಖರೀದಿ ಮಾಡಲು ಯಾರೂ ಬರುತ್ತಿಲ್ಲ. ಆದ್ದರಿಂದ ಕುರಿಗಾರರಿಗೆ ಮೇಯಿಸಲು ಬಿಟ್ಟರೆ, ಕುರಿಗೆ ಆಹಾರದ ಜತೆಗೆ ಜಮೀನಿಗೆ ಉತ್ತಮ ಗೊಬ್ಬರವಾದರೂ ದೊರೆಯುತ್ತದೆ ಎಂದು ಸುಮ್ಮನಾಗಿದ್ದೇವೆ. ಈ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕಿದೆ. | ಆನಂದಪ್ಪ ಪಾರ್ವತ್ತೇರ ಕ್ಯಾಬೀಜ್ ಬೆಳೆದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net