

ತುಮಕೂರು: ಜ್ಞಾನದಾಹ, ಪರಿಶ್ರಮ, ಶ್ರದ್ಧೆಯ ಜತೆಗೆ ಗೆಲ್ಲುವ ಛಲವಿದ್ದಲ್ಲಿ ಎಂತಹ ಕಠಿಣ ಪರೀಕ್ಷೆಗಳನ್ನಾದರೂ ಎದುರಿಸಬಹುದು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ ಹೇಳಿದರು.
ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಗುರುವಾರ ವಿ-ಟೆಕ್ನೋ ಸಿಎ ಫೌಂಡೇಷನ್ ಸಾಧಕ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಯನ, ಅಭ್ಯಾಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಲ್ಲಿ ದಾರಿ ಸುಗಮವಾಗುತ್ತಾ ಸಾಗುತ್ತದೆ. ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಮುಂದಿನ ಹಂತಕ್ಕೆ ಆಯ್ಕೆಯಾಗಿರುವವರು ಗುರಿ ತಲುಪುವ ಬಗ್ಗೆ ದೃಢಮನಸ್ಕರಾಗಿರಿ ಎಂದರು.
ಸಿಎ ಫೌಂಡೇಷನ್ ಸಾಧಕರನ್ನು ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಎ ಆಗುವತ್ತ ಮನಸ್ಸು ಮಾಡಬೇಕು ಎಂದರು.
ವಿ
ದ್ಯಾವಾಹಿನಿ ಪದವಿ ಕಾಲೇಜು ಪ್ರಾಚಾರ್ಯ ಸಿ.ಎಸ್.ಪ್ರೇಮ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವ ನಮ್ಮ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ. ಮುಂದಿನ ವರ್ಷಗಳಲ್ಲಿ ಈ ವಿದ್ಯಾರ್ಥಿಗಳು ಸಿಎ ಆಗುವುದರೊಂದಿಗೆ ಹೊಸತಲೆಮಾರಿನ ಮಕ್ಕಳಿಗೆ ಮಾದರಿಯಾಗುವಂತಾಗಲಿ ಎಂದರು.
ವಿ-ಟೆಕ್ನೋ ಸಿಎ ಫೌಂಡೇಷನ್ ಸಂಯೋಜಕ ಜೆ.ಪಿ.ಸುಧಾಕರ್ ಮಾತನಾಡಿ, ವಿದ್ಯಾವಾಹಿನಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತಿರುವುದರಿಂದ ಎಲ್ಲ ಸಾಧನೆಯೂ ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳು ಇಲ್ಲಿಗೆ ತೃಪ್ತರಾಗದೇ ತಮ್ಮ ಗುರಿಗಳನ್ನು ಎತ್ತರಿಸಿಕೊಳ್ಳಬೇಕು ಎಂದರು. ಉಪನ್ಯಾಸಕಿ ಎಂ.ಎಸ್.ಹೇಮಲತಾ, ಎನ್.ಸೌಮ್ಯಾ, ಆರತಿ ಪಟ್ರಮೆ, ಸಾಧನಾ ಮತ್ತಿತರರು ಇದ್ದರು.
ಭಾರತಾದ್ಯಂತ 137153 ಮಂದಿ ಸಿಎ ಫೌಂಡೇಷನ್ ಪರೀಕ್ಷೆ ಬರೆದಿದ್ದರು. ಈ ಪೈಕಿ 71966 ಮಂದಿ ಹುಡುಗರು ಮತ್ತು 65187 ಮಂದಿ ಹುಡುಗಿಯರು. ಇವರಲ್ಲಿ 41,132 ತೇರ್ಗಡೆಯಾಗಿದ್ದು, 21728 ಮಂದಿ ಹುಡುಗರು ಮತ್ತು 19904 ಮಂದಿ ಹುಡುಗಿಯರು. ಇವರಲ್ಲಿ 29997 ಮಂದಿ ಮಾತ್ರ ಮುಂದಿನ ಹಂತದ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ. ಅವರಲ್ಲಿ ವಿ-ಟೆಕ್ನೋ ಸಿಎ ಫೌಂಡೇಷನ್‌ನ (ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳಿಂದ) 43 ಮಂದಿ ಆಯ್ಕೆಯಾಗಿದ್ದಾರೆ.