ಬಿಜೆಪಿಗೆ ರಾಜೀನಾಮೆ ನೀಡಿದ ಸಿ.ಆರ್. ಬಳ್ಳಾರಿ

C.R. Ballari
Published on

ಹಾವೇರಿ: ಬ್ಯಾಡಗಿ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಸದ್ಯದಲ್ಲೇ ಬೆಂಬಲಿಗರ ಸಭೆ ಕರೆದು ಜನಪರ ಕೆಲಸ ಮಾಡುವ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ ಎಂದು ಗುತ್ತಿಗೆದಾರ ಸಿ.ಆರ್. ಬಳ್ಳಾರಿ ಹೇಳಿದರು.
ನಗರದ ಪ್ರತಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಲು ಕೆಲವು ಮಾನದಂಡಗಳನ್ನು ನಿಗದಿಪಡಿಸಿ ಸರ್ವೇ ಮಾಡಿಸಲಾಗಿತ್ತು. ಆದರೆ, ಸರ್ವೇಯಲ್ಲಿ ಹಿಂದಿರುವ ವ್ಯಕ್ತಿಯನ್ನೇ ಬಿಜೆಪಿ ಅನಿರೀಕ್ಷಿತವಾಗಿ ಅಭ್ಯರ್ಥಿಯಾಗಿ ಘೋಷಿಸಿದ್ದು ಬೇಸರ ತಂದಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿ ಜನಪರ ಕೆಲಸ ಮಾಡಿದ್ದೇನೆ. ಬ್ಯಾಡಗಿ ತಾಲೂಕಿನಲ್ಲಿ 1,200 ಮನೆಗಳ ಪರಿಹಾರ ವಿತರಣೆಯಲ್ಲಿ ಆಗುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವಾಗ ಬೆದರಿಕೆ ಹಾಕಿದ್ದರು. ಕೇವಲ ರಸ್ತೆ ನಿರ್ಮಾಣಕ್ಕೆ ಸೀಮಿತಗೊಳ್ಳದೇ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡುವ ಕನಸು ಕಂಡಿದ್ದೆ. ಆದರೆ, ಬಿಜೆಪಿ ಟಿಕೆಟ್ ನೀಡದೇ ಮೋಸ ಮಾಡಿದ್ದರಿಂದ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಸಣ್ಣ ಕೋಣನವರ, ಜಯಪ್ಪ ಲಮಾಣಿ, ಬಸವಣ್ಣಯ್ಯ ಕುಮರಿಕೊಪ್ಪ, ಶಂಭಣ್ಣ ಮಾಲದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net