ರಸ್ತೆ ಕಾಮಗಾರಿ ವೀಕ್ಷಿಸಿದ ಸಿ.ಎನ್.ಬಾಲಕೃಷ್ಣ

08 HRS 02
ಹಿರೀಸಾವೆ ಗ್ರಾಮದ ಶ್ರೀಕಂಠಯ್ಯ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ಅಪೂರ್ಣಗೊಂಡಿರುವ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ಭಾನುವಾರ ವೀಕ್ಷಿಸಿದರು. ಬೋರಣ್ಣ, ಸುಪ್ರಿತ್, ಎಚ್.ಜಿ.ರಾಮಕೃಷ್ಣ, ರವಿಕುಮಾರ್, ಮಹೇಶ್, ಬಾಬು, ವೆಂಕಟೇಶ್, ಬೋರೇಗೌಡ ಇದ್ದರು.
Published on

ಹಿರೀಸಾವೆ: ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ಅಪೂರ್ಣಗೊಂಡಿರುವ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಹಿರೀಸಾವೆ ಗ್ರಾಮದ ಶ್ರೀಕಂಠಯ್ಯ ವೃತ್ತದಲ್ಲಿ ಶ್ರವಣಬೆಳಗೊಳ ರಸ್ತೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಪೂರ್ಣವಾದ ಹಿನ್ನೆಲೆಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿರುವುದರಿಂದ ಇಲ್ಲಿನ ಅಂಬೇಡ್ಕರ್ ವೃತ್ತ ಮತ್ತು ನುಗ್ಗೇಹಳ್ಳಿ ಕ್ರಾಸ್ ಬಳಿ ಅಪಘಾತಗಳು ಪ್ರತಿನಿತ್ಯ ಸಂಭವಿಸುತ್ತಿವೆ.

ಡಾ.ಅಂಬೇಡ್ಕರ್ ವೃತ್ತ ಇರುವುದರಿಂದ ಸರ್ವಿಸ್ ರಸ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಸ್ಥಳೀಯ ದಲಿತಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಮುಖಂಡರಿಗೆ ಶಾಸಕರು ತಿಳಿಸಿದರು.

ಜತೆಗೆ ರಸ್ತೆ ಕಾಮಗಾರಿ ಪೂರ್ಣವಾದ ನಂತರ ಪಕ್ಕದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಂಡರ್ ಪಾಸ್‌ನ ಮೇಲ್ಭಾಗದಲ್ಲಿ ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿದಿದೆ. ಪೂರ್ಣಗೊಂಡ ನಂತರ ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರ್ ಹಾಕಲಾಗುವುದು. ಅಂಬೇಡ್ಕರ್ ವೃತ್ತವನ್ನು ತೆರವು ಮಾಡಿಕೊಟ್ಟರೆ ತಕ್ಷಣ ಸರ್ವಿಸ್ ರಸ್ತೆ ಮಾಡುವುದಾಗಿ ಕಾಮಗಾರಿ ಉಸ್ತುವಾರಿ ಇಂಜಿನಿಯರ್ ಸೋಮಶೇಖರ್ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಪಿಎಸ್‌ಐ ಸುಪ್ರಿತ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಪ್ರಮುಖರಾದ ರವಿಕುಮಾರ್, ಮಹೇಶ್, ಬಾಬು, ವೆಂಕಟೇಶ್, ಬೋರೇಗೌಡ, ಮಂಜುನಾಥ್, ಡಾಬಾ ಬಾಬು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net