ಸಿ ದರ್ಜೆ ಸಿಬ್ಬಂದಿ ಬಿಎಲ್‌ಒ ಹೊಣೆ

election
Published on

* ಚುನಾವಣಾ ಆಯೋಗ ಸೂಚನೆ ಮೇರೆಗೆ ಪ್ರಕ್ರಿಯೆ ಆರಂಭ

* ಶಿಕ್ಷಕರಿಗೆ ಹೊಸ ಜವಾಬ್ದಾರಿ ನಿರ್ವಹಣೆ ಆತಂಕ

ಗಂಗಾಧರ್ ಬೈರಾಪಟ್ಟಣ ರಾಮನಗರ

ಅಂಗನವಾಡಿ ಶಿಕ್ಷಕಿಯರು ನಿರ್ವಹಿಸುತ್ತಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಜವಾಬ್ದಾರಿಯನ್ನು ಸಿ ದರ್ಜೆ ಸಿಬ್ಬಂದಿಗೆ ನೀಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಗೊಂಡಿವೆ.

ಈ ಸಂಬಂಧ ಭಾರತೀಯ ಚುನಾವಣಾ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಜೂ.15ರೊಳಗೆ ಸಿ ದರ್ಜೆ ಬಿಎಲ್‌ಒಗಳ ಗುರುತಿಸುವಿಕೆ ಮತ್ತು ನೇಮಕ ಸಂಬಂಧ ವರದಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದು ಕಳೆದ ಹಲವು ವರ್ಷಗಳಿಂದಲೂ ಚುನಾವಣಾ ಕರ್ತವ್ಯ ನಿರ್ವಹಿಸಿದ್ದ ಅಂಗನವಾಡಿ ಶಿಕ್ಷಕಿಯರ ಬೇಸರಕ್ಕೆ ಕಾರಣವಾಗಿದ್ದರೆ ಮತ್ತೊಂದೆಡೆ ಹೊಸ ಜವಾಬ್ದಾರಿ ನಿರ್ವಹಣೆ ಹೊಣೆ ನಮ್ಮ ಮೇಲೆ ಬೀಳಲಿದೆ ಎನ್ನುವ ಆತಂಕ ಶಿಕ್ಷಕ ಸಮುದಾಯದಲ್ಲಿ ಮನೆ ಮಾಡಿದೆ.

ಆತಂಕದಲ್ಲಿ ಶಿಕ್ಷಕ ಸಮುದಾಯ ! !

ಬಿಎಲ್‌ಒ ಹುದ್ದೆಗೆ ಸಿ ದರ್ಜೆ ಸಿಬ್ಬಂದಿಯನ್ನೇ ನೇಮಕ ಮಾಡಬೇಕೆನ್ನುವ ಆಯೋಗದ ನಿರ್ದೇಶನ ಪ್ರಮುಖವಾಗಿ ಶಿಕ್ಷಕ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ. ವಿವಿಧ ಗಣತಿಗಳು, ಚುನಾವಣಾ ಕರ್ತವ್ಯ ಎಲ್ಲವನ್ನೂ ಸಾಮಾನ್ಯವಾಗಿ ಶಿಕ್ಷಕ ಸಮುದಾಯವೇ ನಿಭಾಯಿಸುತ್ತದೆ. ಈಗ ಆಯೋಗ ಸಿ ದರ್ಜೆ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಿಎಲ್‌ಒ ಜವಾಬ್ದಾರಿಯನ್ನು ವಹಿಸುತ್ತಾರೆ ಎನ್ನುವ ಆತಂಕ ಶಿಕ್ಷಕ ಸಮುದಾಯದಲ್ಲಿ ಮೂಡಿದೆ. ಈಗಾಗಲೇ ಇಲಾಖೆಯ ಕರ್ತವ್ಯ ಭಾರದಿಂದ ಕುಗ್ಗಿರುವ ಶಿಕ್ಷಕರು ಮತ್ತೊಂದು ಪ್ರಮುಖವಾದ ಭಾರವನ್ನು ಹೊರಲು ಸಿದ್ಧರಿಲ್ಲ.

ಶಿಕ್ಷಕರ ಕೊರತೆ?

ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೇ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಬಹುತೇಕ ಶಾಲೆಗಳಲ್ಲಿ ಒಬ್ಬರು, ಇಲ್ಲವೇ ಇಬ್ಬರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಶಿಕ್ಷಕರಿಗೆ ಬಿಸಿಯೂಟ, ಕ್ಷೀರಭಾಗ್ಯ, ಮೊಟ್ಟೆ ವಿತರಣೆಯಂತಹ ಸೂಕ್ಷ್ಮ ಕೆಲಸಗಳ ಜವಾಬ್ದಾರಿಯೂ ಇದೆ. ಇದರ ಜತೆಗೆ ವಿವಿಧ ವರದಿಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬೇಕಿದೆ. ಇಂತಹ ಸಂದರ್ಭದಲ್ಲಿ ಬಿಎಲ್‌ಒ ಕೆಲಸಗಳ ಹೊರೆಯನ್ನೂ ಶಿಕ್ಷಕರ ಮೇಲೆ ಹಾಕುವ ಜತೆಗೆ ಈಗಾಗಲೇ ಕುಸಿದಿರುವ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಕೆಳಮಟ್ಟಕ್ಕೆ ತಂದರೂ ಆಶ್ಚರ್ಯ ಪಡಬೇಕಿಲ್ಲ.

ಯಾರಿಗೆಲ್ಲ ಹೊರೆ?

ಸದ್ಯಕ್ಕೆ ಪ್ರತಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳ ಶಿಕ್ಷಕರನ್ನೇ ಬಿಎಲ್‌ಒಗಳಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಒಂದು ಊರಿನಲ್ಲಿ ಏಕೋಪಾಧ್ಯಯ ಶಾಲೆ ಇದ್ದರೆ ಅಂತಹ ಕಡೆಗಳಿಗೆ ಕೃಷಿ, ತೋಟಗಾರಿಕೆ ಸೇರಿ ಇತರ ಇಲಾಖೆಯ ಸಿ ದರ್ಜೆ ಸಿಬ್ಬಂದಿ ನೇಮಕ ಮಾಡುವ ಸೂಚನೆಯೂ ಇದೆ. ಒಂದು ವೇಳೆ ಸಿ ದರ್ಜೆ ನೌಕರರು ಬೂತ್ ಮಟ್ಟದಲ್ಲಿ ಇಲ್ಲವಾದರೆ ಇಂತಹ ಮತಗಟ್ಟೆಗಳ ಬಗ್ಗೆ ಮತದಾನ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾನ ನೋಂದಣಾಧಿಕಾರಿಗಳು ದೃಢೀಕರಣ ನೀಡುವಂತೆ ನಿರ್ದೇಶನ ನೀಡಲಾಗಿದೆ.

ಪ್ರಮುಖ ಆಧಾರ ಸ್ತಂಭ

ಅಂಗನವಾಡಿ ಕಾರ್ಯಕರ್ತರು ಚುನಾವಣಾ ಆಯೋಗದ ಎಲ್ಲ ಕರ್ತವ್ಯಗಳ ಪ್ರಮುಖ ಆಧಾರ ಸ್ತಂಭಗಳಂತೆ ಕೆಲಸ ಮಾಡುತ್ತಿದ್ದು, ಕಾಲ ಕಾಲಕ್ಕೆ ಮತದಾರರ ಪಟ್ಟಿ ಪರಿಶೀಲನೆ, ಪರಿಷ್ಕರಣೆ ಜತೆಗೆ ನೂತನ ಮತದಾರರ ನೋಂದಣಿ, ಮತದಾನದ ಮಹತ್ವ ಸಾರುವ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಿದ್ದರು. ಅಲ್ಲದೆ, ಮತದಾನ ಸಂದರ್ಭದಲ್ಲಿ ಗುರುತಿನ ಚೀಟಿಗಳ ವಿತರಣೆ, ಮತ ಕೇಂದ್ರಗಳ ಬಳಿ ಮತದಾನ ಸಿಬ್ಬಂದಿಗೆ ನೆರವು ನೀಡುವ ಕೆಲಸವೂ ಇವರದ್ದೇ ಆಗಿತ್ತು. ಇವರಿಗೆ ವಾರ್ಷಿಕವಾಗಿ 7 ಸಾವಿರ ರೂ. ಗಳನ್ನು ಆಯೋಗ ನೀಡುತ್ತಿತ್ತು.

ಚುನಾವಣೆಗೆ ಸಂಬಂಧಿಸಿದ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದೇವೆ. ಈಗ ಈ ಕೆಲಸವನ್ನು ಸಿ ದರ್ಜೆ ಸಿಬ್ಬಂದಿಗೆ ನೀಡುತ್ತಾರೆ ಎನ್ನುವ ಮಾಹಿತಿ ನಿಜಕ್ಕೂ ಬೇಸರ ತರಿಸಿದೆ. ಹೆಸರು ಹೇಳಲಿಚ್ಛಿಸದ ಅಂಗವಾಡಿ ಶಿಕ್ಷಕಿಸರ್ಕಾರ ಹೇಳುವ ಕೆಲಸವನ್ನು ನಾವು ಮಾಡಬೇಕು ನಿಜ. ಆದರೆ, ಮುಖ್ಯವಾಗಿ ನಾವು ಮಾಡಬೇಕಿರುವ ಕೆಲಸವನ್ನೇ ಸರ್ಕಾರ ನಮ್ಮಿಂದ ಪರೋಕ್ಷವಾಗಿ ಕಸಿದುಕೊಳ್ಳುತ್ತಿದೆ. ಈಗ ಬಿಎಲ್‌ಒ ಜವಾಬ್ದಾರಿಯನ್ನು ನೀಡಿದರೆ ಖಂಡಿತವಾಗಿ ಸರ್ಕಾರಿ ಶಾಲೆ ಮಕ್ಕಳು ನಿಜವಾದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೆಸರು ಹೇಳಲಿಚ್ಛಿಸದ ಶಿಕ್ಷಕಚುನಾವಣಾ ಆಯೋಗದ ಸೂಚನೆ ಮೇರೆಗೆ ಸಿ ದರ್ಜೆ ನೌಕರರನ್ನು ಬಿಎಲ್‌ಒಗಳಾಗಿ ನೇಮಕ ಮಾಡುವ ಕೆಲಸ ಮಾಡಲಾಗುತ್ತಿದೆ. ಬಿನೋಯ್, ಉಪವಿಭಾಗಾಧಿಕಾರಿ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net