

ಜಗನ್ನಾಥ್ ಕಾಳೇನಹಳ್ಳಿ
ತುಮಕೂರು: ಮಾಜಿ ಸಂಸದ, ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರಿಗೆ ಸಿ-ಫಾರಂ ಗುಮ್ಮ ಪ್ರತೀ ಚುನಾವಣಾ ಸಂದರ್ಭದಲ್ಲು ಕಾಡುತ್ತಲೇ ಇರುತ್ತದೆ. ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆ ಎರಡು ಬಾರಿ ಬಿ-ಫಾರಂ ಪಡೆದಿದ್ದರಾದರೂ ಎಸ್ಪಿಎಂಗೆ ಸ್ಪರ್ಧಿಸುವ ಅವಕಾಶವೇ ಕೊನೆಘಳಿಗೆಯಲ್ಲಿ ಕೈತಪ್ಪಿ ಹೋಗಿತ್ತು.
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಒಂದಲ್ಲ, ಎರಡು ಬಾರಿ ಇಂತಹ ಆಘಾತ ಎದುರಿಸಿರುವ ಮುದ್ದಹನುಮೇಗೌಡಗೆ 2019ರ ಲೋಕ ಚುನಾವಣೆಯಲ್ಲಿ ಏರ್ಪಟ್ಟ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದಾಗಿ ಸಂಸದರಾಗಿದ್ದರೂ ಕ್ಷೇತ್ರವನ್ನೇ ಬಿಟ್ಟುಕೊಡಬೇಕಾದ ಅನಿವಾರ್ಯತೆ ತಂದೊಡ್ಡಿತ್ತು. ಇದು ಎಸ್ಪಿಎಂಗೆ ರಾಜಕೀಯ ರಂಗದ ‘ದುರಂತ ನಾಯಕ’ನ ಪಟ್ಟ ಕೂಡ ತಂದುಕೊಟ್ಟಿತ್ತು. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಬಿ-ಫಾರಂ ಪಡೆದು ನಿರುಮ್ಮಳರಾಗಿರುವ ಮುದ್ದಹನುಮೇಗೌಡ ಏ.3 ರಂದು ನಾಮಪತ್ರ ಸಲ್ಲಿಸುವವರೆಗೆ ಈ ಹಿಂದಿನ ಕಹಿ ಘಟನೆ ಕಾಡುತ್ತಲೇ ಇರಲಿದೆ.
ಸಿ-ಫಾರಂ ಗುಮ್ಮ !: 1989ರಲ್ಲಿ ಕಾಂಗ್ರೆಸ್‌ನಿಂದ ಬಿ-ಫಾರಂ ಪಡೆದಿದ್ದ ಮುದ್ದಹನುಮೇಗೌಡ ಬದಲಿಗೆ ಅಂದು ಮಾಜಿ ಸಂಸದ ಕೆ.ಲಕ್ಕಪ್ಪಗೆ ಸಿ-ಫಾರಂ ನೀಡಲಾಗಿತ್ತು. ಹಾಗಾಗಿ, ಸ್ಪರ್ಧಾ ಕಣದಿಂದಲೇ ದೂರ ಸರಿಯುವಂತಾಗಿತ್ತು.
ಆ ನಂತರ 2013ರಲ್ಲಿ ಜೆಡಿಎಸ್‌ನಿಂದ ಬಿ-ಫಾರಂ ಪಡೆದಿದ್ದ ಮುದ್ದಹನುಮೇಗೌಡರಿಗೆ ಕೊನೆಕ್ಷಣದಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪಿತ್ತು. ಆ ಸಂದರ್ಭದಲ್ಲಿ ಡಿ.ನಾಗರಾಜಯ್ಯಗೆ ಸಿ-ಫಾರಂ ನೀಡಿ ಕಣಕ್ಕಿಳಿಸಲಾಗಿತ್ತು. ಈ ಎರಡು ರಾಜಕೀಯ ಕಹಿಘಟನೆಗಳು ಎಸ್ಪಿಎಂ ಅವರನ್ನು ಇನ್ನೂ ಕಾಡುತ್ತಲೇ ಇವೆ.
ಸಂಸದರಾಗಿದ್ದ ಲಕ್ಕಪ್ಪಗೆ ಶಾಸಕ ಸ್ಥಾನ ಬಿಟ್ಟುಕೊಟ್ಟಿದ್ದ ಮುದ್ದಹನುಮೇಗೌಡ 2014ರಲ್ಲಿ ರಾಜಕೀಯ ಚದುರಂಗದಾಟದಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಸಂಸತ್ ಪ್ರವೇಶಿಸಿದ್ದು ಸಹ ಇತಿಹಾಸ.