

ತುಮಕೂರು: ಎಸ್.ಎಲ್. ಭೈರಪ್ಪನವರ ಕಾದಂಬರಿಗಳು ಜೀವನಾನುಭವ ಮತ್ತು ತತ್ವಶಾಸ್ತ್ರದ ಅದ್ಭುತ ಸಮನ್ವಯಕ್ಕೆ ಉದಾಹರಣೆ ಎಂದು ಸಾಹಿತಿ, ಸಂಶೋಧಕ ಡಾ. ಜಿ.ಬಿ. ಹರೀಶ್ ಅಭಿಪ್ರಾಯಪಟ್ಟರು.
ನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತುಮಕೂರು ಜಿಲ್ಲಾ ಹಾಗೂ ತಾಲೂಕು ಸಮಿತಿಗಳು ಗುರುವಾರ ಹಮ್ಮಿಕೊಂಡಿದ್ದ ಡಾ.ಎಸ್.ಎಲ್. ಭೈರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೈರಪ್ಪನವರ ಕೃತಿಗಳನ್ನು ಓದುವುದೆಂದರೆ ಜೀವನವೆಂಬ ಹಿಮಾಲಯಕ್ಕೆ ಮುಖಾಮುಖಿಯಾದಂತೆ ಅಥವಾ ಅದನ್ನೇ ಏರಿದಂತೆ. ತತ್ವಶಾಸ್ತ್ರವನ್ನು ಕ್ಲಿಷ್ಟಕರವೆನಿಸದಂತೆ ಬದುಕಿನ ಅನುಭವಗಳೊಂದಿಗೆ ಮಿಶ್ರಣಗೊಳಿಸಿ ಅವರು ಉಣಬಡಿಸಿದರು. ಭೈರಪ್ಪನವರು ಸಾಹಿತ್ಯದ ಕೋಟೆ ಕಟ್ಟಿಕೊಳ್ಳಲಿಲ್ಲ. ಗುಂಪುಗಾರಿಕೆಯನ್ನೂ ಮಾಡಲಿಲ್ಲ. ತಪಸ್ಸಿನ ರೀತಿಯಲ್ಲಿ ಕುಳಿತು ಬರೆಯುತ್ತಾ ಸಾಹಿತ್ಯದ ರಸಪ್ರವಾಹವನ್ನು ಸೃಷ್ಟಿಸಿದರು ಎಂದು ವಿಶ್ಲೇಷಿಸಿದರು.
ಭೈರಪ್ಪನವರ ಅಧ್ಯಯನಶೀಲತೆ ಎಲ್ಲರಿಗೂ ಮಾದರಿ. ಒಂದು ಕಾದಂಬರಿಗಾಗಿ ಅವರು ವರ್ಷಗಟ್ಟಲೆ ಅಧ್ಯಯನ ಮತ್ತು ಕ್ಷೇತ್ರಕಾರ್ಯ ಮಾಡುತ್ತಿದ್ದರು. ಅಪಾರವಾದ ಏಕಾಗ್ರತೆ ಬಯಸುತ್ತಿದ್ದರು. ಆದ್ದರಿಂದಲೇ ಅವರಿಗೆ ಮಂದ್ರ, ಗೃಹಭಂಗದಂತಹ ಅಮೋಘ ಕಾದಂಬರಿಗಳನ್ನು ಬರೆಯುವುದು ಸಾಧ್ಯವಾಯಿತು. ಭೈರಪ್ಪನವರು ಸಮಕಾಲೀನ ನವೋದಯ-ನವ್ಯ ಕಾದಂಬರಿಕಾರರ ಪಾತ್ರಗಳಿಗಿಂತ ಭಿನ್ನ ಪಾತ್ರಸೃಷ್ಟಿಯಿಂದ ಪ್ರಸಿದ್ಧರಾದರು. ಹೊಸ ಓದುಗರಂತೆ ಹೊಸ ಟೀಕಾಕಾರನ್ನೂ ಪಡೆದರು. ಸಾಹಿತ್ಯರಚನೆಯಲ್ಲಿ ಅವರಿಗೆ ಎಂದೂ ಅವಸರ ಇರಲಿಲ್ಲ ಎಂದರು.
ಸಾಹಿತಿ ಡಾ. ಕಮಲಾ ನರಸಿಂಹ ಮಾತನಾಡಿ, ಭೈರಪ್ಪನವರನ್ನು ಕಾದಂಬರಿಗಳ ಮೂಲಕವಲ್ಲದೆ ಸಿನಿಮಾ ಹಾಗೂ ಕಿರುತೆರೆ ಮೂಲಕವೂ ಅರ್ಥಮಾಡಿಕೊಳ್ಳಬಹುದು. ದೂರಸರಿದರು, ತಬ್ಬಲಿಯು ನೀನಾದೆ ಮಗನೆ, ನಾಯಿನೆರಳು, ಮತದಾನ ಚಲನಚಿತ್ರಗಳು, ಗೃಹಭಂಗ ಧಾರಾವಾಹಿ ಪ್ರತಿಬಾರಿ ನೋಡಿದಾಗಲೂ ವಿಭಿನ್ನ ಅನುಭವ ಕೊಡುತ್ತದೆ ಎಂದು ತಿಳಿಸಿದರು.
ವಿವೇಕವನ್ನು ಅವಿವೇಕ ಆಳುತ್ತಿರುವ ಇಂದಿನ ಕಾಲಮಾನದಲ್ಲಿ ಭೈರಪ್ಪನವರ ಕಾದಂಬರಿಗಳು ಮನುಷ್ಯಪ್ರೀತಿ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಕನ್ನಡಿಹಿಡಿಯುತ್ತವೆ. ಗೃಹಭಂಗ ಕನ್ನಡದ ಸರ್ವಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಸವಿ ಸಂಘದ ಅಧ್ಯಕ್ಷ ಡಾ. ಆರ್. ಎಲ್. ರಮೇಶ್ ಬಾಬು, ಮನುಷ್ಯನಿಗೆ ನಾನು, ನನ್ನದು ಎಂಬ ಭಾವನೆ ಹೆಚ್ಚು. ಆದರೆ ಎಲ್ಲವನ್ನೂ ಮೀರಿದ ಪ್ರಾಕೃತಿಕ ಶಕ್ತಿಯೊಂದು ಅವನನ್ನು ನಿಯಂತ್ರಿಸುತ್ತಿರುತ್ತದೆ ಎಂಬ ಸತ್ಯವನ್ನು ಭೈರಪ್ಪನವರು ತಮ್ಮ ಕೃತಿಗಳ ಮೂಲಕ ಮನಗಾಣಿಸಿದರು ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಸಿಬಂತಿ ಪದ್ಮನಾಭ, ತಾಲೂಕು ಸಮಿತಿ ಅಧ್ಯಕ್ಷ ವೆಂಕಟಸುಬ್ಬನ್, ಕಾರ್ಯದರ್ಶಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.