ಶ್ರೀರಂಗಪಟ್ಟಣ: ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲೂಕಿನ ಅರಕೆರೆ ಗ್ರಾಮದ ಸಿದ್ದರಾಜು ಅವರ ಪುತ್ರ ಮಧು (32) ಮೃತ ಯುವಕ. ಕಾರ್ಯನಿಮಿತ್ತ ಸೋಮವಾರ ರಾತ್ರಿ ಸ್ವಗ್ರಾಮ ಅರಕೆರೆ ಕಡೆಯಿಂದ ಶ್ರೀರಂಗಪಟ್ಟಣಕ್ಕೆ ಆಗಮಿಸುತ್ತಿದ್ದರು. ತಾಲೂಕಿನ ಬನ್ನೂರು-ಶ್ರೀರಂಗಪಟ್ಟಣ ಹೆದ್ದಾರಿಯ ಮರಳಗಾಲ ಸಮೀಪ ಕಡಿದಾದ ತಿರುವಿನಲ್ಲಿ ಬೈಕ್ ನಿಯಂತ್ರಣಕ್ಕೆ ಸಿಗದೆ ಹಳ್ಳದಲ್ಲಿದ್ದ ಜಮೀನಿಗೆ ಬೈಕ್ ಸಮೇತ ಹಾರಿಬಿದ್ದು ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆ ನಡೆದ ವೇಳೆ ಸ್ಥಳದಲ್ಲಿ ಯಾವ ವಾಹನ ಸಂಚಾರ ಹಾಗೂ ಯಾರೂ ಇಲ್ಲದ ಕಾರಣ ಅವಘಡ ಯಾರ ಗಮನಕ್ಕೂ ಬಾರದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಗ್ರಾಮಸ್ಥರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಿದರು. ಈ ಸಂಬಂಧ ಮೃತನ ಸಹೋದರ ಮೋಹನ್ ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.