ಬೆಟ್ಟದಪುರ: ಬೆಟ್ಟದಪುರ ಗ್ರಾಮದ ಹೊರವಲಯದ ಹರದೂರು ಗೇಟ್ ಬಳಿ ಭಾನುವಾರ ಸಂಜೆ ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃತಪಟ್ಟಿದ್ದಾರೆ.
ಸಂಗರಶೆಟ್ಟಹಳ್ಳಿ ಗ್ರಾಮದ ನಿವಾಸಿ ಶಿವಣ್ಣ(59) ಮೃತರು. ಶಿವಣ್ಣ ಅವರು ಮಗನ ಮದುವೆ ನಿಮಿತ್ತ ಬೆಟ್ಟದಪುರದಲ್ಲಿ ಹೂವು ಖರೀದಿಸಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ಕಾರು ಚಾಲಕ ಅತಿ ವೇಗವಾಗಿ, ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಡಬದಿ ಚಲಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಚಾಲನೆ ಮಾಡುತ್ತಿದ್ದ ಶಿವಣ್ಣ ಅವರ ಅಳಿಯ ಮಂಜೇಗೌಡಗೆ ಪೆಟ್ಟಾಗಿದ್ದು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಗಂಭೀರ ಗಾಯಗೊಂಡ ಶಿವಣ್ಣ ಸ್ಥಳದಲ್ಲೇ ಮೃತಪಟ್ಟರು.
ಘಟನೆಗೆ ಕಾರು ಚಾಲಕನೇ ಕಾರಣ ಎಂದು ಮಂಜೇಗೌಡ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.