ಕೈಗೆ ಬೈ ಶಾಸಕರ ಬಣಕ್ಕೆ ಜೈ

Web 1
Published on

ನಗರಸಭೆ 5 ಸದಸ್ಯರಿಂದ ಕಾಂಗ್ರೆಸ್‌ಗೆ ಶಾಕ್ ಕೆಎಚ್‌ಪಿ ಬಣಕ್ಕೆ ಸೇರ್ಪಡೆ ಸ್ಥಳೀಯ ಸಂಸ್ಥೆ ಚುನಾವಣೆ ಹೊಸ್ತಿಲಲ್ಲಿ ಆಘಾತ

ಗೌರಿಬಿದನೂರು: ಮುಂಬರುವ ಜಿಪಂ ಹಾಗೂ ತಾಪಂ ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವ ಕಾಂಗ್ರೆಸ್‌ಗೆ ದೊಡ್ಡ ಆಘಾತ ಉಂಟಾಗಿದೆ. ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ನಗರಸಭೆಯ ಐವರು ಸದಸ್ಯರು ಕಾಂಗ್ರೆಸ್ ತೊರೆದು ಶಾಸಕ ಕೆ.ಎಚ್. ಪುಟ್ಟಸ್ವಾಮಿ ಬಣಕ್ಕೆ ಸೇರುವ ಮೂಲಕ ಶಾಕ್ ನೀಡಿದ್ದಾರೆ.

ನಗರಸಭೆಯಲ್ಲಿ ಕಾಂಗ್ರೆಸ್‌ನ 15 ಸದಸ್ಯರಿದ್ದು, ಈ ಪೈಕಿ ಕಲೀಮ್ ಉಲ್ಲಾ, ಶ್ರೀಕಾಂತ್, ಶ್ರೀರಾಮಪ್ಪ, ಮಂಜುಳಾ, ಗಿರೀಶ್ ಅವರು ಶಾಸಕರ ಬಣಕ್ಕೆ ಸೇರ್ಪಡೆಯಾಗಿರುವುದರಿಂದ ಕಾಂಗ್ರೆಸ್ ಬಲ 10ಕ್ಕೆ ಕುಸಿದಿದೆ. ನಗರ ಸಭೆ ಸದಸ್ಯರ ಜತೆ ಪುರಸಭೆ ಮಾಜಿ ಅಧ್ಯಕ್ಷ ಎಂ.ಎಸ್.ಬಲರಾಮ್, ನಗರಗೆರೆ ಗ್ರಾಪಂ ಸದಸ್ಯ ರವಿಚಂದ್ರ ರೆಡ್ಡಿ, ಮಡಿವಾಳ ಸಮಾಜದ ಮುಖಂಡರಾದ ಸುದರ್ಶನ್ ಬಾಬು, ಕೆಂಪಣ್ಣ, ಅಶೋಕ್, ಚಂದ್ರಣ್ಣ, ವಿವೇಕ್ ಕಾಂಗ್ರೆಸ್ ಬಿಟ್ಟು ಶಾಸಕರ ಬಣ ಸೇರಿದ್ದಾರೆ.

ಮಾಜಿ ಸಚಿವರ ವಿರುದ್ಧ ಅಸಮಾಧಾನ: ನಗರಕ್ಕೆ ಸಮೀಪವಿರುವ ಸೋಲಾರ್ ಘಟಕದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕರ ಬಣ ಸೇರಿದ ಸದಸ್ಯರು ಹಾಗೂ ಮುಖಂಡರು ಮಾಜಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಕಲೀಮ್ ಉಲ್ಲಾ ಮಾತನಾಡಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿ ಮೂರು ಬಾರಿ ನಾನು ನಗರಸಭೆ ಸದಸ್ಯನಾಗಿದ್ದೇನೆ. ಎಂದಿಗೂ ಮಾಜಿ ಶಾಸಕರಿಗೆ ರಾಜಕೀಯವಾಗಿ ವಿಶ್ವಾಸದ್ರೋಹ ಬಗೆದಿಲ್ಲ. ಆದರೂ ನಮ್ಮ ಮೇಲೆ ವಿಶ್ವಾಸವಿಡದ ಕಾರಣ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಿತೈಷಿಗಳು ಹಾಗೂ ವಾರ್ಡ್‌ನ ಜನಾಭಿಪ್ರಾಯದ ಮೇರೆಗೆ ಶಾಸಕ ಪುಟ್ಟಸ್ವಾಮಿಗೌಡರ ಬಣಕ್ಕೆ ಸೇರುತ್ತಿದ್ದೇನೆ. ಶಾಸಕರು ಅಭಿವೃದ್ಧಿಪರ ಜನಪರ ಕಾರ್ಯಕ್ರಮ ತರುತ್ತಿದ್ದಾರೆ. ಹಳಬರು ಹೊಸಬರು ಸೇರಿ ಶಾಸಕರ ಬಣವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ ಎಂದರು.

ಸದಸ್ಯೆ ಮಂಜುಳಾ ಮಾತನಾಡಿ, ವಾರ್ಡ್ ಹಾಗೂ ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರ ಬಣಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದರು.

ರಾಜಕೀಯ ನಿಂತ ನೀರಲ್ಲ

ಗೌರಿಬಿದನೂರು: ಕಾಂಗ್ರೆಸ್‌ನ ಐವರು ನಗರಸಭೆ ಸದಸ್ಯರು ಹಾಗೂ ಮುಖಂಡರನ್ನು ಸೆಳೆಯುವ ಮೂಲಕ ಹಾಲಿ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾಜಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿಗೆ ಸೆಡ್ಡು ಹೊಡೆದಿದ್ದಾರೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಹಾಲಿ ಶಾಸಕರೊಂದಿಗೆ ಸ್ಥಾನ ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್‌ನ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಸ್ಪಷ್ಟಪಡಿಸಿದ್ದರು. ಅದರ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿರುವುದು ತಾಲೂಕಿನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಾನೆಂದಿಗೂ ರಾಜಕೀಯ ದ್ವೇಷ ಸಾಧಿಸುವವನಲ್ಲ. ಮತದಾರರ ಮೇಲೆ ನಂಬಿಕೆಯಿರಿಸಿದ್ದೇನೆ. ಪ್ರೀತಿ ವಿಶ್ವಾಸದಿಂದ ರಾಜಕೀಯ ಮಾಡುತ್ತೇನೆ. ಇಂದು ಪ್ರಾರಂಭ ಅಷ್ಟೇ. ಮುಂದಿನ ದಿನಗಳಲ್ಲಿ ಮತ್ತಷ್ಟು ಮುಖಂಡರು ಕಾರ್ಯಕರ್ತರು ಬರಲಿದ್ದಾರೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಗೆದರೆ, ಅಲ್ಲಿಪುರ, ಜಿಲ್ಲಾ ಕುಂಟೆ, ವಿದುರಾಶ್ವತದಿಂದ ಕುಂಟಚಿಕ್ಕನಹಳ್ಳಿ ಸೇರಿ ವಿವಿಧ ರಸ್ತೆಗಳ ಅಭಿವೃದ್ಧಿ ನಡೆಯುತ್ತಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಪ್ರಗತಿ ನಿಮ್ಮ ಕಣ್ಣ ಮುಂದೆ ಕಾಣಲಿದೆ ಎಂದರು.

ಮಾಜಿ ಶಾಸಕಿ ಎನ್. ಜ್ಯೋತಿ ರೆಡ್ಡಿ ಮಾತನಾಡಿ, ತಾಲೂಕಿನ ರಾಜಕೀಯದಲ್ಲಿ ಬದಲಾವಣೆ ತರಬೇಕು. ಈ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಒಂದಾಗಿ ರಾಜಕೀಯ ಮಾಡುತಿದ್ದವು. ಅವರ ರಾಜಕಾರಣಕ್ಕೆ ನಾನು ಬಲಿಯಾದೆ. ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಪುಟ್ಟಸ್ವಾಮಿಗೌಡರನ್ನು ಬೆಂಬಲಿಸಿದ್ದೇವೆ. ಕಿಂಡಿ ಅಣೆಕಟ್ಟನ್ನು ಎತ್ತರಿಸಿ ಹತ್ತು ಸಾವಿರ ಕ್ಯೂಸೆಕ್ ನೀರು ಶೇಖರಣೆ ಮಾಡುವ ಯೋಜನೆಯನ್ನು ಶಾಸಕರು ಕಾರ್ಯರೂಪಕ್ಕೆ ತರಬೇಕು ಎಂದರು.

ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜ್ ಮಾತನಾಡಿ, ಶಾಸಕರು ಧರ್ಮ ಜಾತಿ ಭೇದ ಮೀರಿ ಕೆಲಸ ಮಾಡುತ್ತಿದ್ದಾರೆ. ಅವರ ಅಭಿವೃದ್ಧಿ ಕೆಲಸ ಮೆಚ್ಚಿ ಸೇರ್ಪಡೆಯ ಪರ್ವ ಪ್ರಾರಂಭವಾಗಿದೆ. ಮುಂಬರುವ ನಗರಸಭೆ ಚುನಾವಣೆಯಲ್ಲಿ ಎಲ್ಲ ವಾರ್ಡ್‌ನಲ್ಲಿ ಹೆಚ್ಚಿನ ಸದಸ್ಯರನ್ನು ಆಯ್ಕೆ ಮಾಡಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕು. ಈ ಹಿಂದೆ ಅಲ್ಲಿಪುರ ಕೇವಲ ಕಾಂಗ್ರೆಸ್ ಮತ ಬ್ಯಾಂಕ್ ಆಗಿ ಬಳಕೆಯಾಗುತ್ತಿತ್ತು. ಆದರೆ ಶಾಸಕ ಪುಟ್ಟಸ್ವಾಮಿಗೌಡರು ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ದಿ ಕಾಮಗಾರಿಗಳಿಗೆ ಸುಮಾರು 6 ಕೋಟಿ ರೂ. ಅನುದಾನ ಬಂದಿದೆ. ಜತೆಗೆ ಅಲ್ಲಿಪುರ ಗ್ರಾಮ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾಡಲು ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ನಗರಸಭಾ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಮುಖಂಡರಾದ ಎಂ. ನರಸಿಂಹಮೂರ್ತಿ, ಎಸ್. ಎಲ್. ಲಕ್ಷ್ಮೀನಾರಾಯಣ ಶೆಟ್ಟಿ, ಎ.ಎನ್. ವೇಣುಗೋಪಾಲ್, ಆರ್.ಆರ್. ರಾಮಕೃಷ್ಣ ರೆಡ್ಡಿ, ವೆಂಕಟರಾಮರೆಡ್ಡಿ, ಮುಂತಾದವರಿದ್ದರು.

ಅಭಿವೃದ್ಧಿಗೆ ಜಯ

ಶಾಸಕನಾಗಿ ಆಯ್ಕೆಯಾದ ಒಂದೂವರೆ ವರ್ಷಗಳ ಬಳಿಕ ಸೇರ್ಪಡೆ ಕಾರ್ಯಕ್ರಮ ನಡೆಯುತ್ತಿದೆ. ಮುಖಂಡರು ಮತ್ತು ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಸೇರುತ್ತಿದ್ದಾರೆ. ಯಾವುದೇ ಆಮಿಷ, ಷರತ್ತು ಒಡ್ಡಿಲ್ಲ. ರಾಜಕೀಯ ನಿಂತ ನೀರಲ್ಲ. ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಹಾಗೂ ನಮ್ಮ ಕಾರ್ಯಕ್ರಮ ಮೆಚ್ಚಿ ನಮ್ಮ ಜತೆ ಕೈಜೋಡಿಸಿದ್ದಾರೆ ಎಂದು ಶಾಸಕ ಪುಟ್ಟಸ್ವಾಮಿಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net