

ಬೆಂಗಳೂರು: ಕರೊನಾ ಕಠಿಣ ನಿಯಮಗಳ ಸಮಯದಲ್ಲಿ, ಜನರ ನಿಯಂತ್ರಣಕ್ಕೆ ರಸ್ತೆಗಿಳಿದು ಕೆಲಸ ಮಾಡುತ್ತಿರುವ ಪೊಲೀಸರ ಮೇಲೂ ಕರೊನಾ ದಾಳಿ ಮುಂದುವರಿಸಿದೆ. ಇದೀಗ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಎಎಸ್ಐ ಮುನಿಯಪ್ಪ (58) ಕರೊನಾ ಸೋಂಕಿಗೆ ತುತ್ತಾಗಿ ಬಲಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕರೊನಾ ಪರೀಕ್ಷೆ ನಡೆಸಲಾಗಿತ್ತು. ಆ ವೇಳೆ ಮುನಿಯಪ್ಪ ಅವರಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ತೀವ್ರ ಉಸಿರಾಟದ ತೊಂದರೆಯಿಂದ ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 2016ರಿಂದ ಬ್ಯಾಟರಾಯನಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಪೊಲೀಸ್ ಇಲಾಖೆ ಇತರ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಪೊಲೀಸ್ ಠಾಣೆಯೇ ಸೀಲ್ ಡೌನ್:
ಬ್ಯಾಟರಾಯನಪುರ ಪೊಲೀಸ್ ಠಾಣೆಯ 26 ಪೊಲೀಸ್ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದ ಶನಿವಾರದಿಂದ ಠಾಣೆಯನ್ನೇ ಸೀಲ್ಡೌನ್ ಮಾಡಲಾಗಿದೆ. ಇವರೆಲ್ಲರೂ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯನ್ನು ಸದ್ಯ ಸಮೀಪದಲ್ಲಿರುವ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ.