ಕರೊನಾ ಭಯದಿಂದ ಅಮ್ಮನನ್ನು ಅಕ್ಕನ ಮನೆ ಎದುರು ಮಲಗಿಸಿ ಬಂದ; ಹೆತ್ತವಳನ್ನು ರಸ್ತೆಯಲ್ಲೇ ಮಲಗಿಸಿದ ಮಗಳು!

up
Published on

ಲಖನೌ: ಹೆತ್ತ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೆ, ಕರೊನಾ ಇದ್ದಿರಬಹುದು ಎಂದು ಅನುಮಾನ ಪಟ್ಟ ಮಗ ಆಕೆಯನ್ನು ತನ್ನ ಅಕ್ಕನ ಮನೆ ಬಾಗಿಲಲ್ಲಿ ಮಲಗಿಸಿ ಬಂದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮಗಳೂ ಕೂಡ ಅಮ್ಮನನ್ನು ಒಳಗೆ ಕರೆದುಕೊಂಡು ಬರದೆ, ಆಕೆಯನ್ನು ರಸ್ತೆಯಲ್ಲೇ ಮಲಗಿಸಿರುವುದಾಗಿ ವರದಿಯಾಗಿದೆ.

ವಯಸ್ಸಾಗಿದ್ದ ಆಕೆ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಕರೊನಾ ಇದ್ದಿರಬಹುದು ಎನ್ನುವ ಅನುಮಾನ ಬಂದ ಹಿನ್ನೆಲೆಯಲ್ಲಿ ಆಕೆಯನ್ನು ಕರೆದುಕೊಂಡು ಹೋದ ಮಗ, ಅಕ್ಕನ ಮನೆ ಬಾಗಿಲಲ್ಲಿ ಮಲಗಿಸಿ ವಾಪಾಸಾಗಿದ್ದಾನೆ. ತಾಯಿ ರಸ್ತೆ ಬದಿ ಮಲಗಿರುವುದು ಕಂಡರೂ ಮನ ಕರಗದ ಮಗಳು ಕೂಡ ಹಾಗೆಯೇ ಬಾಗಿಲು ಹಾಕಿಕೊಂಡಿದ್ದಾಳೆ. ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದು ವೈರಲ್ ಆಗಿದೆ.

ವೈರಲ್​ ವಿಡಿಯೋ ಗಮನಿಸಿದ ಪೊಲೀಸರು ಆಕೆ ಮಲಗಿದ್ದ ಸ್ಥಳಕ್ಕೆ ತೆರಳಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನ ಉಸಿರಾಡುತ್ತಿದ್ದ ಆಕೆ ಆಮೇಲೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆಸ್ಪತ್ರೆ ಸೇರಿದ ನಂತರ ಆಕೆಗೆ ಕರೊನಾ ಪರೀಕ್ಷೆ ಮಾಡಿಸಿದಾಗ ಆಕೆಯಲ್ಲಿ ಸೋಂಕಿರುವುದು ದೃಢವಾಗಿದೆ. ತಾಯಿ ಸತ್ತು ಗಂಟೆಗಳು ಉರುಳಿದರೂ ಆಕೆಯ ಶವವನ್ನು ತೆಗೆದುಕೊಂಡು ಹೋಗಲು ಕುಟುಂಬಸ್ಥರು ಬಂದಿಲ್ಲ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net