ಮೆಣಸಿನಕಾಯಿ ಆವಕದಲ್ಲಿ ಹೊಸ ದಾಖಲೆ

9 byd 4
Published on

ಬ್ಯಾಡಗಿ: ಸ್ಥಳೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ಐದನೇ ಬಾರಿಗೆ ಲಕ್ಷ ಚೀಲ ದಾಟುವ ಮೂಲಕ ಹೊಸ ದಾಖಲೆ ಸೇರ್ಪಡೆಯಾಗಿದೆ.

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಉತ್ತರ ಕರ್ನಾಟದದಲ್ಲಿ ಮೆಣಸಿನಕಾಯಿ ಬೆಳೆ ನಷ್ಟಗೊಂಡಿದೆ ಎಂಬ ಲೆಕ್ಕಾಚಾರ ವರ್ತಕರಲ್ಲಿತ್ತು. ಆದರೆ, ಹಿಂಗಾರು ನೀರಾವರಿ ಬೆಳೆಯಾಗಿ ಮೆಣಸಿನಕಾಯಿ ಬೆಳೆದಿರುವುದರಿಂದ ರೈತರು ಬಂಪರ್ ಬೆಳೆ ಹಾಗೂ ಬೆಲೆ ಪಡೆಯುತ್ತಿದ್ದಾರೆ.

ಕರೊನಾ ವೈರಸ್ ಹಾವಳಿಯಿಂದ ಮಾರುಕಟ್ಟೆ ವಹಿವಾಟು ಕುಗ್ಗಬಹುದೆಂಬ ವದಂತಿಗೆ ರೈತರು ಕಿವಿಗೊಟ್ಟಿಲ್ಲ. ವ್ಯಾಪಾರವಂತೂ ಸೋಮವಾರ ಭರ್ಜರಿಯಾಗಿ ನಡೆದಿದೆ. 1,26,903 ಚೀಲಗಳು ಆವಕಗೊಂಡಿದ್ದು, ಪ್ರಸಕ್ತ ವರ್ಷದಲ್ಲಿಯೇ ಅತಿಹೆಚ್ಚು ಆವಕವಾದ ದಿನವಾಗಿದೆ.

ಲಕ್ಷ ಚೀಲಗಳ ಆವಕ ದಿನ: 2019 ಡಿಸೆಂಬರ್ ಹಾಗೂ 2020 ಜನವರಿಯಲ್ಲಿ ಮಾರುಕಟ್ಟೆಗೆ ಮೆಣಸಿನಕಾಯಿ ಆವಕ ತುಸು ನಿಧಾನಗತಿಯಲ್ಲಿ ಆರಂಭವಾಗಿತ್ತು. 40 ಸಾವಿರ ಚೀಲಗಳಿಂದ ಆರಂಭವಾಗಿ ಪ್ರಸಕ್ತ ಸಾಲಿನ ಫೆಬ್ರವರಿ 20ರಂದು 82148 ಚೀಲಗಳು ಆವಕಗೊಂಡಿದ್ದವು. ಬಳಿಕ ಸತತವಾಗಿ ಫೆ. 24ರಂದು 121644 ಚೀಲಗಳು, ಫೆ. 27ರಂದು 126583 ಚೀಲಗಳು, ಮಾ. 2ರಂದು 120083 ಚೀಲಗಳು, ಮಾ. 5ರಂದು 118106 ಚೀಲಗಳು ಆವಕಗೊಂಡು ಸತತವಾಗಿ ಐದು ಬಾರಿ ಲಕ್ಷ ಚೀಲ ದಾಟಿ ಮಾರುಕಟ್ಟೆ ವ್ಯಾಪಾರದ ಖ್ಯಾತಿ ಉಳಿಸಿಕೊಂಡಿದೆ.

ಇಂದಿನ ದರ: ಬ್ಯಾಡಗಿ ಕಡ್ಡಿ 2,499 ರಿಂದ 25,009, ಡಬ್ಬಿ 3,009 ರಿಂದ 32,000, ಗುಂಟೂರು 1089 ರಿಂದ 11,509 ರೂ.ದರದಲ್ಲಿ ಮಾರಾಟವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಹಿಂದಿನ ನಾಲ್ಕಾರು ವರ್ಷಗಳಲ್ಲಿ ಮಾರುಕಟ್ಟೆ ಗುರಿಗಿಂತ ಹೆಚ್ಚು ಶುಲ್ಕ ಸಂಗ್ರಹವಾಗಿದೆ. ಈ ಬಾರಿ ಒಟ್ಟು ಚೀಲಗಳ ಆವಕ ಕಡಿಮೆಯಿದ್ದರೂ, ದರ ಏರಿಕೆಯಿಂದ ಪ್ರಸಕ್ತ ಸಾಲಿನ 19.40 ಕೋಟಿ ರೂ. ಗುರಿ ತಲುಪುವ ನಿರೀಕ್ಷೆಯಲ್ಲಿದೆ. ಹಿಂದಿನ ವರ್ಷ 15.14 ಕೋಟಿ ರೂ. ಶುಲ್ಕ ಸಂಗ್ರಯವಾಗಿತ್ತು. ಪ್ರಸಕ್ತ ವರ್ಷದ ಮಾ. 9ರವರೆಗೂ ಒಟ್ಟು 13 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ. ಇನ್ನೂ 3 ಕೋಟಿ ರೂ. ಅಂದಾಜಿದೆ. ಉಳಿದ ಮೊತ್ತದ ಗುರಿ ಮಾರುಕಟ್ಟೆಯ ಲೆಕ್ಕಾಚಾರದ ನಿರೀಕ್ಷೆಯಲ್ಲಿದೆ. ರೈತರು ಇನ್ನಷ್ಟು ಗುಣಮಟ್ಟದ ಕಾಯಿಗಳನ್ನು ತರುವುದು, ಸ್ವಚ್ಛತೆಗೆ ಆದ್ಯತೆಗೆ ಒತ್ತು ನೀಡಬೇಕಿದೆ. | ಪ್ರಭು ದೊಡ್ಡಮನಿ, ಲೆಕ್ಕಪತ್ರ ವಿಭಾಗ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net