ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘದ ಶತಮಾನೋತ್ಸವ

24byd1
Published on

ಬ್ಯಾಡಗಿ: ಏಷ್ಯಾ ಖಂಡದಲ್ಲಿ ಅಖಂಡ ಧಾರವಾಡ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮೂಲಕ ನಾಡಿನಲ್ಲಿ ಖ್ಯಾತಿ ಗಳಿಸಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ ಹೇಳಿದರು.

ಇಲ್ಲಿನ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬ್ಯಾಡಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟದ ಸಹಕಾರಿ ಸಂಘ ನಿಯಮಿತ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಧಾರ್ವಿುಕ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರ ಸೇರಿದಂತೆ ಎಲ್ಲ ರಂಗಗಳಲ್ಲಿ ಸಹಕಾರ ಮನೋಭಾವವಿದ್ದಲ್ಲಿ ಅಭಿವೃದ್ಧಿ ಸಾಧ್ಯ. ಗದಗ ಜಿಲ್ಲೆ ಶಿಡಗನಾಳ ಸಿದ್ದನಗೌಡ್ರ ಪಾಟೀಲ ಸಹಕಾರಿ ಭೀಷ್ಮ ಎಂದೇ ಖ್ಯಾತಿಯಾಗಿದ್ದು, ಆಗಿನಿಂದ ಆರಂಭವಾದ ಸಹಕಾರಿ ಸಂಘಗಳು ಭವಿಷ್ಯದಲ್ಲಿ ದೊಡ್ಡ ಸಂಸ್ಥೆಗಳಾಗಿ ಬೆಳೆದುನಿಂತಿವೆ. ಬ್ಯಾಡಗಿಯ ಒಕ್ಕಲುತನ ಹುಟ್ಟುವಳಿ ಸಹಕಾರಿ ಸಂಘ 118 ಸದಸ್ಯರ ರೂ. 2115 ಠೇವಣೆಯಿಂದ ಬೆಳೆದು ನೂರು ವರ್ಷಗಳ ಕಾಲ ಏಳುಬೀಳುಗಳ ಮಧ್ಯೆ 2 ಕೋ.ರೂ. ಮಿಕ್ಕಿದ ವಹಿವಾಟು ನಡೆಸುತ್ತಿರುವುದು ಶ್ಲಾಘನೀಯ. ಸಾಧನೆ ಹಿಂದೆ ಆಡಳಿತ ಮಂಡಳಿ ಪ್ರಾಮಾಣಿಕತೆ, ನಿಸ್ವಾರ್ಥ ಮನೋಭಾವ ಕಾರಣವಾಗಿದೆ. ಇಲ್ಲಿ ರೈತಪರ ಧೋರಣೆಗಳಿವೆ. ಎಲ್ಲ ಸದಸ್ಯರು ರೈತರಿದ್ದು, ಮೋಸದ ಲವಲೇಶವೂ ಇಲ್ಲ ಎಂದರು.

ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಗ್ರಾ.ಪಂ. ಹಾಗೂ ಸಹಕಾರಿ ಸಂಘಗಳಲ್ಲಿ ಪ್ರಾಮಾಣಿಕತೆಯಿದ್ದಲ್ಲಿ ಅಭಿವೃದ್ಧಿ ಕಾಣಬಹುದು. ಎಲ್ಲ ಸಹಕಾರಿ ಸಂಘಗಳಲ್ಲಿ ಆಧುನಿಕ ಸ್ಪರ್ಷ, ಉದಾರೀಕರಣ ತರಬೇಕಿದೆ. ರೈತರಿಗಾಗಿರುವ ಸಹಕಾರಿ ಸಂಸ್ಥೆಗಳು ಗೊಬ್ಬರ, ಬೀಜಗಳ ಮೋಸಕ್ಕೆ ಅವಕಾಶ ನೀಡಬಾರದು. ಉಗ್ರಾಣ ನಿಗಮ ಪ್ರತಿವರ್ಷ 25 ಕೋ.ರೂ ಲಾಭದಲ್ಲಿತ್ತು. ಆದರೆ, ನಾಲ್ಕು ವರ್ಷಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಭವಿಷ್ಯದಲ್ಲಿ ಸುಧಾರಣೆ ತರಲು ಯತ್ನಿಸಲಾಗುವುದು. ರೈತರಿಗೆ ಬೆಂಬಲ ಬೆಲೆ ಸಿಗಬೇಕಿದ್ದು, ಉಗ್ರಾಣಗಳು ಬೆಲೆ ಕುಸಿತಗೊಂಡ ವೇಳೆ ರೈತರಿಗೆ ತುಸು ಸಹಕಾರಿಯಾಗಲಿವೆ. ವೈಜ್ಞಾನಿಕ ಬೆಲೆ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಶತಮಾನೋತ್ಸವ ಕಂಡ ಸಂಘಗಳ ಏಳಿಗೆಗೆ ಹೊಸ ನೀತಿ ಪ್ರಕಟವಾಗಬೇಕಿದೆ ಎಂದರು.

ರೈತಪರ ನಿಲುವಿಗೆ ಬದ್ಧ: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸರ್ಕಾರ ಎಂದಿಗೂ ಎಪಿಎಂಸಿ ಹಾಗೂ ಸಹಕಾರಿ ಸಂಘಗಳನ್ನು ಮುಚ್ಚಲು ಬಿಡುವುದಿಲ್ಲ. ರೈತಪರ ನಿಲುವಿಗೆ ಬದ್ಧವಾಗಿ ಹೊಸ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಕಟಿಸಿವೆ. ಮಾರುಕಟ್ಟೆ, ರೈತರ ಅಭಿವೃದ್ಧಿಗೆ ಚಿಂತನೆ ನಡೆದಿದೆ. ಮಾರುಕಟ್ಟೆಗಳನ್ನು ಸರ್ಕಾರ ಮುಚ್ಚುವುದಾದರೆ, ರಾಣೆಬೆನ್ನೂರ ಬಳಿ ಹೂಲಿಹಳ್ಳಿ ಮೆಗಾ ಮಾರುಕಟ್ಟೆ ಅಭಿವೃದ್ದಿಗೆ ಸರ್ಕಾರ 120 ಕೋ.ರೂ. ಏಕೆ ಬಿಡುಗಡೆ ಮಾಡುತ್ತಿತ್ತು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬ್ಯಾಡಗಿ ಸಹಕಾರಿ ಸಂಘ ನೂರು ವರ್ಷ ದಾಟಿದ್ದು, ಸಂಘದ ಅಭಿವೃದ್ಧಿಗೆ ಸರ್ಕಾರದಿಂದ ಸಹಕಾರ ನೀಡಲಾಗುಗುವುದು ಎಂದರು.

ಒಕ್ಕಲುತ ಹುಟ್ಟುವಳಿ ಸಹಕಾರಿ ಸಂಘದ ಅಧ್ಯಕ್ಷ ತಿರಕನಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶತಮಾನೋತ್ಸವ ಸ್ಮರಣ ಸಂಚಿಕೆಯನ್ನು ಯು.ಬಿ.ಬಣಕಾರ, ಮಾಜಿ ಸಚಿವ ರುದ್ರಪ್ಪ ಲಮಾಣಿ ಶತಮಾನೋತ್ಸವ ನೆನಪಿಗೆ ಬೆಳ್ಳಿ ನಾಣ್ಯ ಬಿಡುಗಡೆಗೊಳಿಸಿದರು.

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ, ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಹಿರೇಕೆರೂರು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ, ಪುರಸಭೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ಪಿಎಲ್​ಡಿ ಬ್ಯಾಂಕ ನಿರ್ದೇಶಕ ಸುರೇಶ ಯತ್ನಳ್ಳಿ, ಸಹಕಾರಿ ಸಂಘದ ನಿಬಂಧಕರಾದ ಜಿ.ಎಂ. ಪಾಟೀಲ, ನಾಗಪ್ಪ ಕುಮ್ಮೂರು, ಬಿ.ಎನ್. ಮಾತನವರ, ಎಚ್.ಎನ್. ನಾಯ್ಕರ, ದಾನಪ್ಪ ಚೂರಿ, ಯಶೋದ ಮುಡದೇವಣ್ಣನವರ, ಪ್ರವೀಣ ಬಿದರಕಟ್ಟೆ, ಕೆ.ಎಚ್. ಹಾದಿಮನಿ, ಸಿ.ಕೆ. ಶೆಟ್ಟರ, ಎನ್.ಆರ್. ಚೌಗಲೆ, ಬಿ.ಎನ್. ನೆಲ್ಲಿಕೊಪ್ಪ, ಸಂಘದ ಸಿಬ್ಬಂದಿ ಕೆ.ಸಿ. ಬಣಕಾರ, ಪಿ.ಎಸ್. ಬಣಕಾರ, ಜಿ.ಎಸ್. ಬಸನಗೌಡ್ರ, ಯು.ಸಿ. ದಾನಮ್ಮನವರ, ಎಸ್.ಆರ್. ಪಾಟೀಲ, ಎನ್.ಎನ್. ಮಾನಿ, ಎಸ್.ಡಿ. ಬಿರಾದಾರ, ಅಂಬಿಗರ ಚೌಡಯ್ಯ ನಿಗಮ ನಿರ್ದೇಶಕ ಜಿತೇಂದ್ರ ಸುಣಗಾರ ಇದ್ದರು. ಶಿಕ್ಷಕ ಜೀವರಾಜ ಛತ್ರದ, ಗಂಗಣ್ಣ ಎಲಿ, ಎ. ಶಿವಶಂಕರಪ್ಪ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net