

ತುಮಕೂರು: ರಾಜ್ಯದಲ್ಲಿ ಅಭಿವೃದ್ಧಿ ಅನ್ನೋದು ಮರಿಚಿಕೆಯಾಗಿದೆ. ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಖಜಾನೆ ಖಾಲಿಯಾಗಿದ್ದು ರೈತರಿಗೆ ಪರಿಹಾರ ಕೊಡಲಿಕ್ಕೆ ಆಗುತ್ತಿಲ್ಲ. ಬಡವರ ಪರ ಮೊಸಳೆ ಕಣ್ಣೀರು ಹಾಕಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.
ಗುಬ್ಬಿ ಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರ ರೋಡ್ ಶೋ ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶ ಅಭಿವೃದ್ಧಿ ಪಥದತ್ತ ಸಾಗಬೇಕು ಎಂಬುದೇ ದೇವೆಗೌಡರ ಕನಸು. ಹಾಗಾಗಿ, ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಪಣತೊಟ್ಟಿದ್ದಾರೆ. ಕಳೆದ 10 ತಿಂಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ಅನುದಾನ ಬಂದಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ ಶಾಪ ತಟ್ಟಿದೆ. ಬರಗಾಲ ವಕ್ಕರಿಸಿದೆ. ನಾಡಿನ ರೈತರಿಗೆ ಬರ ಪರಿಹಾರ ಕೊಡದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ. ಈ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿವೆ. ಇಡೀ ದೇಶದಲ್ಲಿ ಇಷ್ಟೊಂದು ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡಿರುವ ಸರ್ಕಾರ ಮತ್ತೊಂದಿಲ್ಲ. ಜಾತಿ ಜಾತಿ ನಡುವೆ ವಿಷಬೀಜ ಬಿತ್ತುವ ಮುಖ್ಯಮಂತ್ರಿ, ಗ್ಯಾರೆಂಟಿ ಗ್ಯಾರೆಂಟಿ ಅಂತಾ ಹೇಳಿಕೊಂಡು ಜನರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ಧಾಳಿ ನಡೆಸಿದರು.