

ಹೊಸಪೇಟೆ: ಕಳೆದ ವರ್ಷ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ಕಲಿಕಾ ಚೇತರಿಕೆ ಮತ್ತಿತರ ಕಾರಣದಿಂದಾಗಿ ಶೈಕ್ಷಣಿಕ ವರ್ಷ ಆರಂಭಗೊಂಡು ಒಂದೆರಡು ತಿಂಗಳು ಕಳೆದರೂ ಪುಸ್ತಕಗಳು ಮಕ್ಕಳ ಕೈಸೇರದೆ, ಪಾಠ-ಪ್ರವಚನಕ್ಕೆ ಸಮಸ್ಯೆಯಾಗಿತ್ತು.
ಆದರೆ, ಈ ಬಾರಿ ಶಾಲೆ ಆರಂಭಕ್ಕೂ ಮುನ್ನವೇ ವಿಜಯನಗರ ಜಿಲ್ಲೆಗೆ ಪಠ್ಯಪುಸ್ತಕಗಳು ಸರಬರಾಜಾಗಿವೆ. ಇದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರಲ್ಲಿ ಸಮಾಧಾನ ಮೂಡಿಸಿದೆ.
ಪ್ರತಿ ವರ್ಷ ಒಂದಿಲ್ಲೊಂದು ಕಾರಣದಿಂದ ಸಕಾಲಕ್ಕೆ ಪಠ್ಯಪುಸ್ತಕಗಳು ಪೂರೈಕೆಯಾಗುತ್ತಿರಲಿಲ್ಲ. ಅದರಲ್ಲೂ ಕಳೆದ ವರ್ಷ ದೇಶದ ಇತಿಹಾಸ, ವ್ಯಕ್ತಿಗಳ ಕುರಿತಾದ ಪಠ್ಯ ವಿಷಯಕ್ಕೆ ಸಂಬಂಧಿಸಿ ಬಹು ಚರ್ಚೆಗೆ ಗುರಿಯಾಗಿದ್ದರಿಂದ ವಿವಿಧ ತರಗತಿಗಳ ಪಠ್ಯಪುಸ್ತಕಗಳ ಪೂರೈಕೆ ವಿಳಂಬವಾಗಿತ್ತು.
ಆ ಪೈಕಿ 6ನೇ ತರಗತಿ ಕನ್ನಡ, 7ನೇ ತರಗತಿಯ ಹಿಂದಿ, ಸಮಾಜ ಭಾಗ - 1 ಮತ್ತು 2, 8ನೇ ತರಗತಿಯ ಸಮಾಜ ವಿಜ್ಞಾನ, 9ನೇ ತರಗತಿಯ ಕನ್ನಡ, ಹಿಂದಿ ಮತ್ತು ಸಮಾಜ ಭಾಗ-1 ಮತ್ತು 2, 10ನೇ ತರಗತಿಯ ಕನ್ನಡ ವಿಷಯದ ಪುಸ್ತಕಗಳ ಪೂರೈಕೆ ತಡವಾಗಿತ್ತು. ಇದರಿಂದಾಗಿ ಪಾಠ ಬೋಧನೆಯಲ್ಲಿ ತೊಂದರೆ ಆಗಿದ್ದನ್ನು ಅರಿತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೂ 15 ದಿನಗಳ ಮೊದಲೇ ಪಠ್ಯಪುಸ್ತಕಗಳನ್ನು ಒದಗಿಸಿದೆ.
ಜಿಲ್ಲೆಯಿಂದ ಸಲ್ಲಿಕೆಯಾಗಿದ್ದ ಪುಸ್ತಕಗಳ ಬೇಡಿಕೆಯಲ್ಲಿ ಶೇ.99 ಪೂರೈಕೆಯಾಗಿವೆ. ಉಚಿತ, ಆರ್‌ಟಿಇ ಹಾಗೂ ಮಾರಾಟ ಸೇರಿದಂತೆ ಒಟ್ಟು 18,63,970 ಬೇಡಿಕೆಯಲ್ಲಿ 16,64,028 ಲಭ್ಯವಾಗಿವೆ.
ಅದರಲ್ಲಿ 3,39,306 ಉಚಿತ, 1597 ಆರ್‌ಟಿಇ ಮತ್ತು 1,10,381 ಮಾರಾಟಕ್ಕಾಗಿ ಪುಸ್ತಕಗಳನ್ನು ಸರ್ಕಾರ ಒದಗಿಸಿದೆ. 4,51,284 ಪುಸ್ತಕಗಳು ಈಗಾಗಲೇ ಶಾಲೆಗಳಿಗೆ ಸರಬರಾಜು ಮಾಡಲಾಗಿದ್ದು, ಇನ್ನುಳಿದವು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನಿಗದಿತ ಶಾಲೆಗಳಿಗೆ ತಲುಪಿಸಲಾಗುತ್ತಿದೆ.
ಜಿಲ್ಲೆಯಲ್ಲಿ 2.81 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ಪ್ರವೇಶ ಪಡೆದಿದ್ದು, 1 ರಿಂದ 10ನೇ ತರಗತಿವರೆಗಿನ ಬಹುತೇಕ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಸರಬರಾಜು ಆಗಿವೆ. ಜಿಲ್ಲೆಯ ತಾಲೂಕುವಾರು ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕ್ಲಸ್ಟರ್ ಮೂಲಕ ಶಾಲಾ ಮುಖ್ಯಶಿಕ್ಷಕರಿಗೆ ಹಸ್ತಾಂತರಿಸಲಾಗುತ್ತಿದೆ. ಮೇ 29 ರಂದು ಶಾಲಾ ಆರಂಭೋತ್ಸದಿಂದ ಮಕ್ಕಳಿಗೆ ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 1134 ಸರ್ಕಾರಿ, 140 ಅನುದಾನಿತ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಉಚಿತವಾಗಿ ಪೂರೈಸಲಾಗುತ್ತದೆ. ಇನ್ನುಳಿದಂತೆ 494 ಖಾಸಗಿ ಶಾಲೆಗಳಿಗೆ ಸರ್ಕಾರದ ನಿಗದಿತ ದರದಲ್ಲಿ ಒದಗಿಸಲಾಗುತ್ತದೆ.
ಆಯಾ ಶಾಲೆಗಳ ಕೋರಿಕೆಯಂತೆ 14,43,347 ಉಚಿತ ಹಾಗೂ 3,83,699 ಪುಸ್ತಕಗಳನ್ನು ಮಾರಾಟಕ್ಕಾಗಿ ಕೋರಿ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಆ ಪೈಕಿ 12,30,293 ಉಚಿತ ಮತ್ತು 3,58,303 ಮಾರಾಟಕ್ಕಾಗಿ ಪುಸ್ತಕಗಳು ಬಂದಿವೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ವಿಜಯನಗರ ಜಿಲ್ಲೆಯ ಎಲ್ಲ ತಾಲೂಕಿನ ಪಠ್ಯಪುಸ್ತಕಗಳ ಬೇಡಿಕೆಯಲ್ಲಿ ಶೇ.87 ಉಚಿತ ಮತ್ತು ಶೇ.99 ಮಾರಾಟಕ್ಕಾಗಿ ಲಭ್ಯವಾಗಿವೆ. ತಾಲೂಕುವಾರು ಶಾಲೆಗಳಿಗೆ ವಿತರಿಸಲಾಗುತ್ತದೆ. ಈ ಬಾರಿ ಬಹುಬೇಗ ಪುಸ್ತಕಗಳು ಪೂರೈಕೆಯಾಗಿದ್ದು ಎಲ್ಲರಿಗೂ ಖುಷಿ ತಂದಿದೆ.| ಜಿ.ಕೊಟ್ರೇಶ್, ಡಿಡಿಪಿಐ, ವಿಜಯನಗರ