ಸಿನಿಮಾ

ಶಾಲಾರಂಭಕ್ಕೂ ಮುನ್ನವೇ ಮಕ್ಕಳ ಕೈ ಸೇರುತ್ತಿವೆ ಪಠ್ಯಪುಸ್ತಕ; ೯೧% ರಷ್ಟು ಪೂರೈಕೆ

ಶಿವಾನಂದ ಕಲ್ಲೂರ, ಬೆಳಗಾವಿ
ಬೇಸಿಗೆ ರಜೆ ಬಳಿಕ ಶಾಲೆ ಆರಂಭವಾದರೇ ಮಕ್ಕಳಿಗೆ ಪಠ್ಯ ಪುಸ್ತಕಗಳದ್ದೇ ಚಿಂತೆ. ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಪಠ್ಯ ಪುಸ್ತಕಗಳು ಬರುವುದಿಲ್ಲ. ಕಳೆದ ವರ್ಷ ಶಾಲಾರಂಭಗೊಂಡು ಎರಡು ತಿಂಗಳಾದರೂ ಮುದ್ರಣವೇ ಆಗಿರಲಿಲ್ಲ. ಪುಸ್ತಕಗಳಿಲ್ಲದೆ ಪಾಠ ಹೇಳಲು ಶಿಕ್ಷಕರು ಮೂರು ತಿಂಗಳಕಾಲ ತೊಂದರೆ ಅನುಭವಿಸಿದರು. ಆದರೆ, ಈ ಬಾರಿ ಸೋಜಿಗ ಎಂಬಂತೆ ಆರಂಭಕ್ಕೂ ಮುನ್ನವೇ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿವೆ.

ಮೇ 29ರಿಂದ ಶಾಲೆಗಳು ಆರಂಭವಾಗಲಿದ್ದು, ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ 26,75,955 ಪಠ್ಯಪುಸ್ತಕಗಳ ಬೇಡಿಕೆ ಇತ್ತು. ಆ ಪೈಕಿ ಶೇ 99.69 ರಷ್ಟು ಅಂದರೆ 26,26,892 ಪುಸ್ತಕಗಳ ಪೂರೈಕೆಯಾಗಿವೆ. ಅದರಲ್ಲಿ 23,99,937 ಶಾಲೆಗಳನ್ನು ತಲುಪಿವೆ.
ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಪಠ್ಯ ಪುಸ್ತಕಗಳು ಉಚಿತ. ಖಾಸಗಿ ಶಾಲೆಗಳು ಹಣ ಪಾವತಿಸಿ ತರಿಸಿಕೊಳ್ಳಬೇಕು. ಕಳೆದ ಸಲ ಕೆಲವು ವಿಷಯಗಳ ಪಠ್ಯ ಪುಸ್ತಕಗಳು ಸಕಾಲಕ್ಕೆ ಬರದಿದ್ದರಿಂದ ಹಲವು ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳಿಂದ ಪುಸ್ತಕ ಸಂಗ್ರಹಿಸಿ ಮಕ್ಕಳಿಗೆ ನೀಡಲಾಗಿತ್ತು. ಈ ಬಾರಿ ಖಾಸಗಿ ಶಾಲೆಗಳ ಬೇಡಿಕೆಯೇ 5,76,476ರಷ್ಟಿದ್ದು, ಜಿಲ್ಲೆಯ ಗೋದಾಮುಗಳಿಗೆ 5.69 ಲಕ್ಷ ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಅವುಗಳಲ್ಲಿ ಶೇ.63 ರಷ್ಟು (3,63,620) ಪುಸ್ತಕಗಳನ್ನು ಮಾರಾಟ ಮಾಡಲಾಗಿದ್ದು, ಉಳಿದವುಗಳನ್ನು ಖಾಸಗಿ ಶಾಲೆಗಳು ಹಣ ಪಾವತಿಸಿದ ಬಳಿಕವೇ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿ ನಗರ ವಲಯದ ಶಾಲೆಗಳಿಗೆ ಪುಸ್ತಕಗಳನ್ನು ಪೂರೈಸುತ್ತಿರುವ ನೂಡಲ್ ಅಧಿಕಾರಿ ಬಿ.ಸಿ.ಮುದಕನಗೌಡರ ಹಾಗೂ ಸಿಬ್ಬಂದಿ.

ಬೆಳಗಾವಿ ನಗರ ವಲಯದಲ್ಲಿ 6,01,62 ರಷ್ಟು ಬೇಡಿಕೆ ಇತ್ತು. ಉರ್ದು ಮಾದ್ಯಮದ ಒಂದನೇ ಮತ್ತು ಎರಡನೇ ತರಗತಿಯ ನಲಿಕಲಿ ಪುಸ್ತಕಗಳನ್ನು ಹೊರತು ಪಡಿಸಿ, ಈಗಾಗಲೇ 5,97,464 ರಷ್ಟು ಪುಸ್ತಕಗಳನ್ನು ಪೂರೈಕೆಯಾಗಿದೆ. 5,01,880 ಪುಸ್ತಕಗಳನ್ನು ಆಯಾ ಶಾಲೆಗಳಿಗೆ ತಲುಪಿಸಲಾಗಿದೆ. ಇನ್ನೂ ಬೇಡಿಕೆಗೆ ತಕ್ಕಂತೆ ಪಠ್ಯಪುಸ್ತಕಗಳನ್ನು ಪೂರೈಸಲಾಗುತ್ತಿದ್ದು  ಶಾಲೆ ಪುನಾರಂಭದ ಮೊದಲ ಎರಡು ವಾರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತದೆ ಎಂದು ನಗರ ಪಠ್ಯಪುಸ್ತಕ ನೂಡಲ್ ಅಧಿಕಾರಿ ಬಿ.ಸಿ.ಮುದಕನಗೌಡರ ಪ್ರತಿಕ್ರಿಯಿಸಿ,ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ ಬೇಡಿಕೆಯಂತೆ ಶೇ.99.69 ರಷ್ಟು ಪಠ್ಯ ಪುಸ್ತಕಗಳು ಬಂದಿದ್ದು, ಶಾಲೆಗಳ ಆರಂಭಕ್ಕೆ 15 ದಿನ ಇರುವಾಗಲೇ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿವೆ. ಪ್ರತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮೂಲಕ ಆಯಾ ಶಾಲೆಗಳಿಗೆ ಪಠ್ಯ ಪುಸ್ತಕವನ್ನು ತಲುಪಿಸಲಾಗಿದೆ. ಇನ್ನೂ ಹಲವು ಖಾಸಾಗಿ ಶಾಲೆಗಳು ಹಣ ಪಾವತಿಸಿ, ಖರೀದಿಸಿ ತೆಗೆದುಕೊಂಡು ಹೋಗಲು ವಿಳಂಬಮಾಡುತ್ತಿದೆ. ಈ ವಾರದಲ್ಲಿ 100% ಪೂರೈಕೆ ಸಾಧ್ಯವಾಗಲಿದೆ.

ಗೋವಿಂದ್ಪಪ್ಪ ಕಂಬಳಿ, ಪಠ್ಯಪುಸ್ತಕ ಜಿಲ್ಲಾ ನೂಡಲ್ ಅಧಿಕಾರಿ

ಈ ಕುರಿತು ಪ್ರತಿಕ್ರಿಯಿಸಿದ ಖಾಸಗಿ ಶಾಲೆಯೊಂದರ ಮುಖ್ಯಶಿಕ್ಷಕರು, ಪಠ್ಯ ಪರಿಷ್ಕರಣೆಯ ಬಳಿಕ ಸರ್ಕಾರವು ಶೇ.25ರಷ್ಟು ಪಠ್ಯಪುಸ್ತಕದ ಬೆಲೆ ಹೆಚ್ಚಿಸಿದೆ. ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಂದ ಪುಸ್ತಕಗಳಿಗಾಗಿ ಶುಲ್ಕ ಪಡೆದ ಬಳಿಕವೇ ಆಯಾ ಖಾಸಗಿ ಶಾಲೆಗಳಿಂದ ಇಲಾಖೆಗೆ ಹಣ ಪಾವತಿಸಿ, ಅಗತ್ಯ ಪುಸ್ತಕಗಳನ್ನು ತಂದು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಈ ವರ್ಷ ಮಕ್ಕಳಿಗೆ ಪುಸ್ತಕಗಳು ಆರಂಭದಲ್ಲೇ ಸಿಗುತ್ತಿರುವುದು ಪಾಲರಕರನ್ನು ನಿರಾಳ ಮಾಡಿದೆ ಎನ್ನಲಾಗಿದೆ ಆದರೂ, ಅಧಿಕಾರಿಗಳು ಹೇಳಿದರೆ, ಖಾಸಗಿ ಶಾಲೆಗಳು ಪಠ್ಯಪುಸ್ತಕಗಳಿಗಾಗಿ ಮನಬಂದಂತೆ ಪಾಲಕರಿಂದ ವಸೂಲಿ ಮಾಡುತ್ತಿದೆ ಎಂಬ ಆರೋಪ ಪಾಲಕರಿಂದ ಕೇಳಿಬಂದಿದೆ.

Latest Posts

ಲೈಫ್‌ಸ್ಟೈಲ್