ಉಪಚುನಾವಣೆಗೆ ಎರಡು ಗ್ರಾಪಂ ಸಿದ್ಧ

1211-KRT-SHARANAPPA 1
ಸಿದ್ದಾಪುರ ಗ್ರಾಪಂನಲ್ಲಿ ಚುನಾವಣಾಧಿಕಾರಿ ಹನುಮೇಶ್‌ಗೆ ಚೇತನ್ ಎಸ್. ನಾಮಪತ್ರ ಸಲ್ಲಿಸಿದರು. ಪ್ರಮುಖಂಡರಾದ ಬಸವರಾಜ ನೀರಗಂಟಿ, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಅಮರೇಶ್ ಬಸೆಟ್ಟರ್, ಪಂಪಾಪತಿ ಮರಕುಂಬಿ, ಆದೆಪ್ಪ ಬಸರಿಕಟ್ಟೆ, ಚನ್ನಬಸನಗೌಡ ಮಾಲಿ ಪಾಟೀಲ್, ದೊಡ್ಡನಗೌಡ ಪಾನ್‌ಶಾಪ್, ಮಹ್ಮದ್ ಮಾನ್ವಿ, ರಾಮಣ್ಣ ಭೋವಿ ಇತರರಿದ್ದರು.
Published on

ಕಾರಟಗಿ: ತಾಲೂಕಿನ ಸಿದ್ದಾಪುರ ಹಾಗೂ ಬೆನ್ನೂರು ಗ್ರಾಪಂ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಎರಡು ಗ್ರಾಪಂನಿಂದ ಐವರು ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆ ಸಲ್ಲಿಸಿದರು.

ಸಿದ್ದಾಪುರ ಗ್ರಾಪಂನಲ್ಲಿ ಉಪಾಧ್ಯಕ್ಷರಾಗಿದ್ದ ಗಂಗಪ್ಪ ಸುಂಕಪ್ಪ ನಿಧನರಾಗಿದ್ದು, 2ನೇ ವಾರ್ಡ್ ಸದಸ್ಯ ಸ್ಥಾನ ತೆರವಾಗಿತ್ತು. ಅಭ್ಯರ್ಥಿಗಳಾಗಿ ಅಮರೇಶ ಸಿಂಗನಾಳ, ಎಸ್.ಚೇತನ್ ಹಾಗೂ ಶಾರದಾ ಗಂಗಪ್ಪ ಸುಂಕದ್ ಇವರು ಚುನಾವಣಾಧಿಕಾರಿ ಹನುಮೇಶ್‌ಗೆ ನಾಮಪತ್ರ ಸಲ್ಲಿಸಿದರು.

ಬೆನ್ನೂರು ಗ್ರಾಪಂನ ಕಕ್ಕರಗೋಳದ 2ನೇ ವಾರ್ಡ್ ಸದಸ್ಯ ಉಮಾ ಮಹೇಶ್ವರಪ್ಪ ನಿಧನರಾದ ಹಿನ್ನೆಲೆಯಲ್ಲಿ ಸದಸ್ಯ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಬಸವರಾಜ ಫಕೀರಪ್ಪ ಹಾಗೂ ಶಿವರಡ್ಡಿಗೌಡ ಮಲ್ಲನಗೌಡ ಇವರು ಚುನಾವಣಾಧಿಕಾರಿ ತಿಪ್ಪಣ್ಣಗೆ ನಾಮಪತ್ರ ಸಲ್ಲಿಸಿದರು.

ಡಿಸಿ ನಲಿನ್ ಅತುಲ್ ನ.6ರಂದು ಅಧಿಸೂಚನೆ ಹೊರಡಿಸಿದ್ದರು. ನ.13ರಂದು ನಾಮಪತ್ರಗಳ ಪರಿಶೀಲನೆ. 15ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ನ.23ರ ಬೆಳಗ್ಗೆ 7 ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ. ಮರುಮತದಾನ ಅವಶ್ಯವಿದ್ದರೆ ನ.25ರಂದು ಅವಕಾಶ ಕಲ್ಪಿಸಲಾಗಿದೆ. ನ.26 ರಂದು ತಾಲೂಕು ಕೇಂದ್ರದಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಸಿದ್ದಾಪುರ ಗ್ರಾಪಂ ಉಪಾಧ್ಯಕ್ಷ ಗಂಗಪ್ಪ ಸುಂಕದ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದರು. ಅವರ ನಿಧನದ ನಂತರ ಅವರ ಪತ್ನಿ ಶಾರದಾ ಗಂಗಪ್ಪ ಸುಂಕದ್ ಅವರನ್ನು ಕೆಲ ದಿನಗಳ ಹಿಂದೆ ಮುಖಂಡರು ಸಭೆ ಸೇರಿ ಅಂತಿಮಗೊಳಿಸಿದ್ದರು.

ಆದರೂ ಮೂರು ನಾಮಪತ್ರ ಸಲ್ಲಿಕೆಯಾಗಿವೆ. ಶಾರದಾ ಗಂಗಪ್ಪ ಪುತ್ರ ಚೇತನ್ ಕೂಡ ನಾಮಪತ್ರ ಸಲ್ಲಿಸಿರುವುದು ಗಮನಾರ್ಹ. ಅಮರೇಶ್ ಸಿಂಗನಾಳ ನ.15ರಂದು ಚುನಾವಣಾ ಕಣದಿಂದ ಹಿಂದೆ ಸರಿಯದಿದ್ದರೆ ನ.23ರಂದು ಚುನಾವಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net