ಪುತ್ತೂರು ಗ್ರಾಮಾಂತರ:ಪುತ್ತೂರು ತಾಲೂಕಿನ ಅರಿಯಡ್ಕ ಮತ್ತು ಕೆದಂಬಾಡಿ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರ ನಿಧನದಿಂದಾಗಿ ತೆರವಾಗಿದ್ದ ತಲಾ ಒಂದು ಸ್ಥಾನಗಳಿಗೆ ನ.23ರಂದು ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿ ಅರಿಯಡ್ಕದಲ್ಲಿ 4 ಮತ್ತು ಕೆದಂಬಾಡಿಯಲ್ಲಿ 6 ಸೇರಿ ಒಟ್ಟು 10 ನಾಮಪತ್ರ ಸಲ್ಲಿಕೆಯಾಗಿದೆ.
ನಾಮಪತ್ರಗಳ ಪರಿಶೀಲನೆ ಬುಧವಾರ ನಡೆಯಲಿದ್ದು, ಗುರುವಾರ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ. ಅರಿಯಡ್ಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಹಾಗೂ ಕೆದಂಬಾಡಿಯಲ್ಲಿ ಬಿಜೆಪಿ, ಎಸ್ಡಿಪಿಐ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಕೆದಂಬಾಡಿಯಲ್ಲಿ 6 ನಾಮಪತ್ರ: ಕೆದಂಬಾಡಿ ಗ್ರಾಮ ಪಂಚಾಯಿತಿ 4ನೇ ವಾರ್ಡಿನ ಸಾಮಾನ್ಯ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮೋಹನ್ ತಿಂಗಳಾಡಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮೆಲ್ವಿನ್ ಮೊಂತೆರೋ ಮತ್ತು ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ರಫೀಕ್ ನಂಜೆ ಸೋಮವಾರ ನಾಮಪತ್ರ ಸಲ್ಲಿಸಿದ್ದರು. ಈ ಮೂರು ಪಕ್ಷಗಳ ಬೆಂಬಲಿತ ಡಮ್ಮಿ ಅಭ್ಯರ್ಥಿಗಳಾಗಿ ಮೂವರು ನಾಮಪತ್ರ ಸಲ್ಲಿಸಿದ್ದು, ಇಲ್ಲಿ ಸಲ್ಲಿಕೆಯಾದ ನಾಮಪತ್ರಗಳ ಸಂಖ್ಯೆ 6ಕ್ಕೇರಿದೆ. ಇಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಅರಿಯಡ್ಕದಲ್ಲಿ 4 ನಾಮಪತ್ರ: ಅರಿಯಡ್ಕ ಗ್ರಾಪಂ ಮಾಡ್ನೂರು 2ನೇ ವಾರ್ಡಿನ ಪರಿಶಿಷ್ಟ ಜಾತಿಗೆ ಮೀಸಲು ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಡಮ್ಮಿ ಅಭ್ಯರ್ಥಿಯಾಗಿ ವಿಠಲ ಮತ್ತು ಬಿಜೆಪಿ ಬೆಂಬಲಿತ ಡಮ್ಮಿ ಅಭ್ಯರ್ಥಿಯಾಗಿ ಉಮೇಶ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಿನಯ್ಕುಮಾರ್ ಮಾಡನ್ನೂರು ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹರೀಶ್ ಎ.ಕೆ.ಮಾಡ್ನೂರು ಸೋಮವಾರ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಒಟ್ಟು 4 ನಾಮಪತ್ರ ಸಲ್ಲಿಕೆಯಾಗಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ನೇರ ಹಣಾಹಣಿ ನಡೆಯಲಿದೆ.