

ಬೆಂಗಳೂರು: ನೀರು ಉಳಿತಾಯ ಹಾಗೂ ಸಂಸ್ಕರಿಸಿದ ನೀರಿನ ಬಳಕೆಯ ಹೆಚ್ಚಳ ಸೇರಿದಂತೆ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಆರಂಭಿಸಿರುವ ಗ್ರೀನ್ ಸ್ಟಾರ್ ಚಾಲೆಂಜ್ನಲ್ಲಿ ಪಾಲ್ಗೊಳ್ಳುವವರ ನೋಂದಣಿಗಾಗಿ ಆನ್ಲೈನ್ ವೆಬ್ ಪೋರ್ಟಲ್ ಪ್ಲಾಟ್ಫಾರಂನ್ನು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಬುಧವಾರ ಅನಾವರಣಗೊಳಿಸಲಾಯಿತು.
ಬಳಿಕ ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಮಾ.14 ರಂದು "ನೀರು ಉಳಿಸಿ ಬೆಂಗಳೂರು ಬೆಳೆಸಿ' ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮುಂದುವರೆದ ಭಾಗವಾಗಿ ಗ್ರೀನ್ ಸ್ಟಾರ್ ಚಾಲೆಂಜ್ ಪ್ರಾರಂಭಿಸಲಾಗಿತ್ತು. ವೆಬ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡು ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ನಗರದಲ್ಲಿರುವ ಅಪಾರ್ಟ್ಮೆಂಟ್, ಹೋಟೇಲ್, ಶೈಣಿಕ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು, ಆಸ್ಪತ್ರೆಗಳು, ಸಾರ್ವಜನಿಕ ಉದ್ದಿಮೆಗಳು ಮತ್ತಿತರೆ ಕಟ್ಟಡಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಆಯಾ ವಿಭಾಗವಾರು ಕಟ್ಟಡಗಳಿಗೆ ರೇಟಿಂಗ್ನ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಲಮಂಡಳಿ ಅಧಿಕಾರಿಗಳು ಸ್ಪರ್ಧೆಯಲ್ಲಿ ಭಾಗವಹಿಸದೇ ಇರುವ ಕಟ್ಟಡಗಳಿಗೆ ಹಾಗೂ ಕಡಿಮೆ ಸ್ಟಾರ್ ರೇಟಿಂಗ್ ಹೊಂದಿರುವ ಅಪಾರ್ಟ್ಮೆಂಟ್ಗಳಿಗೆ ಭೇಟಿ ನೀಡಿ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವಂತೆ ಮನವೊಲಿಸಲಿದ್ದಾರೆ. ಈ ಸೂತ್ರಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಮೂಲಕ ನಗರದಲ್ಲಿ ನೀರಿನ ಸಮರ್ಪಕ ಬಳಕೆಯನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಜಲಮಂಡಳಿಯಿಂದ ಪರಿಶೀಲನೆ, ಪ್ರಮಾಣ ಪತ್ರ
ಎರಡನೇ ಹಂತದಲ್ಲಿ ಸ್ಪರ್ಧೆಯಲ್ಲಿ ಭಾಗಿಯಾದವರ ಕಟ್ಟಡಗಳನ್ನು ಜಲಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಯಾವ ಕಟ್ಟಡಗಳಲ್ಲಿ ಯಾವ ಯಾವ ಸೂತ್ರಗಳನ್ನು ಅಳವಡಿಸಿಕೊಂಡಿದ್ದಾರೋ, ಅಷ್ಟು ಸ್ಟಾರ್ ರೇಟೀಂಗ್ನ ಪ್ರಮಾಣ ಪತ್ರ ನಂತರ ನೀಡಲಾಗುತ್ತದೆ. ಪಂಚಸೂತ್ರಗಳನ್ನು ಅಳವಡಿಸಿಕೊಂಡ ಮೇಲೂ ನೀರಿನ ಸಮಸ್ಯೆ ಇದ್ದರೆ ಜಲಮಂಡಳಿ ವತಿಯಿಂದ ಆದ್ಯತೆ ಮೇರೆಗೆ ಪರಿಹರಿಸಲಾಗುವುದು ಎಂದು ತಿಳಿಸಿದರು.
ಎಫ್ಕೆಸಿಸಿಐ ವತಿಯಿಂದ ಅಭಿಯಾನ
ಜಲಮಂಡಳಿ ಜತೆಗೂಡಿ ಎಫ್ಕೆಸಿಸಿಐ ವರ್ಷದಾದ್ಯಂತ ತನ್ನ ಸದಸ್ಯ ಕೈಗಾರಿಕಾ ಸಂಸ್ಥೆಗಳಲ್ಲಿ ನೀರು ಉಳಿತಾಯದ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವ ಅಭಿಯಾನ ನಡೆಸಲಿದೆ. ಗ್ರೀನ್ ಸ್ಟಾರ್ ಚಾಲೆಂಜ್ ಅತ್ಯುತ್ತಮ ಯೋಜನೆಯಾಗಿದೆ. ಕ್ರಾಂತಿಕಾರಿ ಕ್ರಮಗಳನ್ನು ಸದಸ್ಯರ ಸಂಸ್ಥೆಗಳಲ್ಲಿ ಅಳವಡಿಸುವ ನಿಟ್ಟಿನಲ್ಲಿ ನಾವು ವಿಶೇಷ ವಿಭಾಗ ಆರಂಭಿಸಲಿದ್ದೇವೆ. ಆ ವಿಭಾಗ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಹಾಗೂ ಸದಸ್ಯರಲ್ಲಿ ಜಾಗೃತಿ ಮೂಡಿಸಲಿದೆ ಎಂದು ಎಫ್ಕೆಸಿಸಿಐ ಅಧ್ಯ ರಮೇಶ್ ಚಂದ್ರ ಲಹೋಟಿ ತಿಳಿಸಿದರು.
ಬೆಂಗಳೂರು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಫ್ಕೆಸಿಸಿಐ, ಬೆಂಗಳೂರು ಅಪಾರ್ಟ್ಮೆಂಟ್ ಅಸೋಸಿಯೇಷನ್, ಕ್ರೆಡೈ, ಹೊಟೇಲ್ ಅಸೋಸಿಯೇಷನ್ ಸೇರಿದಂತೆ ಹಲವು ಸಂ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ನೀರಿನ ಉಳಿತಾಯ ಮಾಡುವಂತಹ ತಂತ್ರಾನ ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಾನದ ಅಳವಡಿಕೆ ಮಾಡಿಕೊಳ್ಳುವುದು, ಇಂಗು ಗುಂಡಿಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಮಾಹಿತಿ ನೀಡುವ ಮೂಲಕ ನೀರಿನ ಉಳಿತಾಯದ ಮಹತ್ವ ಸಾರುವುದು. ಈ ಸೂತ್ರಗಳನ್ನು ಅಳವಡಿಸಿಕೊಂಡರೆ ಫೈವ್ ಸ್ಟಾರ್ ಗ್ರೀನ್ ರೇಟಿಂಗ್ ನೀಡಲಾಗುತ್ತದೆ.
-ಡಾ.ವಿ.ರಾಮಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ