

ಬೆಂಗಳೂರು: ಹತ್ತು ವರ್ಷಗಳ ನಂತರ ಬೆಂಗಳೂರು ಜಲಮಂಡಳಿ ಕುಡಿಯುವ ನೀರಿನ ದರ ಏರಿಸಲು ಚಿಂತನೆ ನಡೆಸಿತ್ತು. ಇದಕ್ಕೆ ಪೂರಕವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ 'ಜಲಮಂಡಳಿ ಉಳಿಸಲು ಹಾಗೂ ಅಭಿವೃದ್ಧಿಗೊಳಿಸಲು ನೀರಿನ ದರ ಏರಿಕೆ ಅನಿವಾರ್ಯ' ಎಂದಿರುವುದು ಪ್ರಕ್ರಿಯೆಗೆ ಮತ್ತಷ್ಟು ವೇಗ ಸಿಕ್ಕಿದೆ.
ಜಲಮಂಡಳಿ 2014ರಲ್ಲಿ ಕೊನೆಯ ಬಾರಿಗೆ ನೀರಿನ ದರ ಹೆಚ್ಚಿಸಿತ್ತು. ಇದೀಗ ಮತ್ತೆ ದರ ಪರಿಷ್ಕರಿಸಲು ಮುಂದಾಗಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ.
ಪ್ರಸ್ತುತ ಕನಿಷ್ಠ ನೀರಿನ ದರ 56 ರೂ. ಇದೆ. 8,000 ಲೀಟರ್ ನೀರು ಬಳಕೆ ಮಾಡುವವರಿಗೆ ಸಾವಿರ ಲೀ.ಗೆ 7 ರೂ. ಶುಲ್ಕವಿದೆ. 8,000& 25,000 ಲೀ. ನೀರು ಬಳಸುವವರಿಗೆ ಸಾವಿರ ಲೀ.ಗೆ 11 ರೂ. ದರವಿದೆ. 25,000& 50,000 ಲೀ. ನೀರು ಬಳಕೆ ಮಾಡುವ ಗ್ರಾಹಕರಿಗೆ ಸಾವಿರ ಲೀ.ಗೆ 26 ರೂ. ಶುಲ್ಕ ಇದೆ.
8,000 ಲೀ. ನೀರು ಬಳಕೆ ದರ ಹೆಚ್ಚಿಸದಿರಲು ಜಲಮಂಡಳಿ ನಿರ್ಧರಿಸಿದೆ. 8,000-25,000 ಲೀ. ನೀರು ಬಳಕೆ ಮಾಡುವವರಿಗೆ ಸಾವಿರ ಲೀಟರ್ಗೆ 11-15 ರೂ. ಹೆಚ್ಚಳ, 25,000-50,000 ಲೀ. ಬಳಸುವ ಗ್ರಾಹಕರಿಗೆ ಸಾವಿರ ಲೀಟರ್ಗೆ 26-30 ರೂ. ಹೆಚ್ಚಿಸಲು ಜಲಮಂಡಳಿ ಮುಂದಾಗಿದೆ ಎನ್ನಲಾಗಿದೆ.
ಜಲಮಂಡಳಿ ಆದಾಯದ ಬಹುಪಾಲು ಮೊತ್ತ ವಿದ್ಯುತ್ ವೆಚ್ಚಕ್ಕೆ ವ್ಯಯವಾಗುತ್ತಿದೆ. ನೀರಿನ ದರ ಸಂಗ್ರಹ ಸೇರಿ ವಿವಿಧ ಮೂಲಗಳಿಂದ ಪ್ರತಿ ತಿಂಗಳು 119 ಕೋಟಿ ರೂ. ಆದಾಯ ಸಂಗ್ರಹವಾಗುತ್ತಿದೆ. ಇದರಲ್ಲಿ ಶೇ.55&60 ಮೊತ್ತ ವಿದ್ಯುತ್ ಶುಲ್ಕ ಕಟ್ಟಲು ಖರ್ಚಾಗುತ್ತಿದೆ. ಉಳಿದ ಹಣದಲ್ಲಿ ಜಲಮಂಡಳಿ ಇತರೆ ವೆಚ್ಚಗಳನ್ನು ನಿಭಾಯಿಸುತ್ತಿದೆ.