ಜಲಮಂಡಳಿ ಪರಿಸ್ಥಿತಿ ಚಿಂತಾಜನಕ ಎಂದ ಡಿಸಿಎಂ: ಏರಿಕೆ ಆಗುತ್ತಾ ನೀರಿನ ದರ?

BWSSB
Published on

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್​ಎಸ್​ಬಿ) ಕುರಿತು ಇಂದು ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಬಿಡಬ್ಲ್ಯುಎಸ್​ಎಸ್​ಬಿ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ. ಮಾತ್ರವಲ್ಲ, ಅಲ್ಲಿನ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಅವರು ಉಲ್ಲೇಖಿಸಿದ್ದು, ನೀರಿನ ದರ ಏರಿಕೆ ಆಗಲಿದೆಯೇ ಎಂಬ ಅನಿಸಿಕೆಯೂ ವ್ಯಕ್ತವಾಗಲಾರಂಭಿಸಿದೆ.

ಬಿಡಬ್ಲ್ಯೂಎಸ್‌ಎಸ್‌ಬಿ ಕಚೇರಿ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಬ್ಲ್ಯುಎಸ್​ಎಸ್​ಬಿ ಪರಿಸ್ಥಿತಿ ಚಿಂತಾಜನಕವಾಗಿದೆ. 2014ರಿಂದ ಇಲ್ಲಿಯವರೆಗೂ ನೀರಿನ ದರ ಪರಿಷ್ಕರಣೆಯಾಗಿಲ್ಲ. ಸಂಸ್ಥೆಯಲ್ಲಿ ವೇತನ ಹಾಗೂ ವಿದ್ಯುತ್ ಬಿಲ್ ಪಾವತಿಗೆ ಹಣವಿಲ್ಲದಂತಾಗಿದೆ. ಇಲ್ಲಿನ ಸಿಬ್ಬಂದಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಗೆ ಪರಿಹಾರ ಕಂಡುಕೊಡಬೇಕು. ಅಧಿಕಾರಿಗಳು ಅಕ್ರಮ ನೀರಿನ ಸಂಪರ್ಕವನ್ನು ಶೇ.48ರಿಂದ ಶೇ.28ಕ್ಕೆ ಇಳಿಸಿದ್ದಾರೆ. ಈ ಅನಧಿಕೃತ ನೀರಿನ ಸಂಪರ್ಕದ ಬಗ್ಗೆ ನನಗೆ ವರದಿ ನೀಡಿದ್ದು, ಎಲ್ಲೆಲ್ಲಿ ಅನಧಿಕೃತ ಸಂಪರ್ಕ ಇದೆ ಎಂದು ಪತ್ತೆಹಚ್ಚಲು ಹೇಳಿದ್ದೇನೆ ಎಂದರು.

ಈ ಸಂಸ್ಥೆಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡಲಾಗುತ್ತಿದೆ. ಆದರೂ ಬರುವ 104 ಕೋಟಿ ರೂಪಾಯಿಯಲ್ಲಿ 90ರಿಂದ 95 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಲು ಖರ್ಚಾಗುತ್ತಿದೆ. ಇಲ್ಲಿ ಸಂಪನ್ಮೂಲ ಕ್ರೋಡೀಕರಣ ಆಗಬೇಕಿದೆ. ಇಲ್ಲದಿದ್ದರೆ ಇಂತಹ ಸಂಸ್ಥೆ ಉಳಿಯಲು ಸಾಧ್ಯವಿಲ್ಲ. ಬೆಂಗಳೂರಿನ ಜನರಿಗೆ ಬಹಳ ಸ್ವಚ್ಛವಾದ ನೀರನ್ನು ಪೂರೈಸಬೇಕು. ಇದಕ್ಕಾಗಿ ಎಲ್ಲೆಲ್ಲಿ ಸ್ವಚ್ಛ ನೀರು ನೀಡಲು ಸಾಧ್ಯವಾಗುತ್ತಿಲ್ಲವೋ ಅಲ್ಲಿ ನೀರಿನ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ನೂತನ ದರದ ವಿಚಾರವಾಗಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು. ಪಾಲಿಕೆಯಿಂದ ಈ ಸಂಸ್ಥೆಗೆ ಬರಬೇಕಾದ ಹಣ ಸರಿಯಾಗಿ ಬಂದಿಲ್ಲ. ಈ ವಿಚಾರವಾಗಿ ನಾನು ಗಮನಹರಿಸುತ್ತೇನೆ. ಈ ಸಂಸ್ಥೆ ಮತ್ತೆ ಆರೋಗ್ಯಕರವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದೂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net