ಅನಧಿಕೃತ ಸಂಪರ್ಕ ಸಕ್ರಮ ಮಾಡದಿದ್ದರೆ ಕ್ರಮ; ಜಲಮಂಡಳಿ ಅಧ್ಯಕ್ಷರ ಎಚ್ಚರಿಕೆ

BWSSB
Published on

ಬೆಂಗಳೂರು: ಮಳೆಗಾಲದಲ್ಲಿ ಅನಧಿಕೃತ ಸಂಪರ್ಕಗಳಿಂದ ಬರುವ ತ್ಯಾಜ್ಯ ನೀರು ಒಳಚರಂಡಿ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಿಕೊಳ್ಳಲು ಸ್ವಯಂ ಪ್ರೇರಿತರಾಗಿ ಮುಂದಾಗಬೇಕು. ಇಲ್ಲವಾದಲ್ಲಿ ಸೋಮವಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್​ಪ್ರಸಾತ್​ ಮನೋಹರ್​ ಎಚ್ಚರಿಕೆ ನೀಡಿದ್ದಾರೆ.

ತ್ಯಾಜ್ಯ ನೀರನ್ನು ಒಳಚರಂಡಿ ಹಾಗೂ ಮಳೆ ಕಾಲುವೆಗೆ ಹರಿಸುತ್ತಿರುವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಜಲಮಂಡಳಿ ಚುರುಕುಗೊಳಿಸಿದೆ. ಈವರೆಗೆ 17,793 ಕಡೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. 587 ಅಪಾರ್ಟ್​ಮೆಂಟ್​ಗಳನ್ನು ಒಳಗೊಂಡಂತೆ ಅನಧಿಕೃತ ಸಂಪರ್ಕ ಪಡೆದಿರುವ 2,137 ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ 260 ಸಂಪರ್ಕಗಳನ್ನು ಅಧಿಕೃತಗೊಳಿಸಲು ಅರ್ಜಿ ಸಲ್ಲಿಸಲಾಗಿದೆ. 149 ಸಂಪರ್ಕಗಳಿಗೆ ಡಿಮಾಂಡ್​ ನೋಟಿಸ್​ ಜಾರಿಗೊಳಿಸಲಾಗಿದ್ದು, 60 ಸಂಪರ್ಕಗಳಿಂದ ದಂಡ ವಸೂಲಿ ಮಾಡಲಾಗಿದೆ. 1,390 ಸಂಪರ್ಕಗಳಿಗೆ ನೋಟಿಸ್​ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅನಧಿಕೃತ ಸಂಪರ್ಕದಿಂದ ಒಳಚರಂಡಿ ಮೇಲೆ ಒತ್ತಡ ಹೆಚ್ಚಾಗಿ ಹಲವೆಡೆ ರಸ್ತೆಗಳಲ್ಲಿ ತ್ಯಾಜ್ಯ ನೀರು ಹರಿಯುವ ಸಾಧ್ಯತೆ ಇದ್ದು, ಇದನ್ನು ತಡೆಯುವ ದೃಷ್ಟಿಯಿಂದ ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಲು ಏ. 24ರಿಂದ ಅವಕಾಶ ನೀಡಲಾಗಿತ್ತು. ಸದ್ಯ ಮಂಡಳಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಯಬಿಡುತ್ತಿರುವುದರ ಪರಿಶೀಲನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ ಎಂದು ರಾಮ್​ ಪ್ರಸಾತ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net