ಮಧುರ ನೆನಪುಗಳಿಗೆ ಸ್ನೇಹ ಸಂಗಮ ಸಾಕ್ಷಿ

8E2A0065
ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಪೂರ್ವ ಪ್ರಾಥಮಿಕ, ಮಾಧ್ಯಮಿಕ ಹಾಗೂ ನೂತನ ಪ್ರೌಢಶಾಲೆಯ ೧೯೯೨-೨೦೦೪ ನೇ ಸಾಲಿನ ಎಸ್ ಎಸ್ ಎಲ್ ಸಿ ಹಳೇ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಂಗಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು.
Published on

ಬಾಗಲಕೋಟೆ: ಅರೇ ಎಷ್ಟು ದೊಡ್ಡಾವ್ರ ಆಗಿದ್ರಿ ಅಲ್ಲ. ಎಲ್ಲಿ ಕೆಲಸ ಮಾಡತೀ..ಚೂಲ ಆತು. ನೀನ ಇಲ್ಲಿಗೆ ಬಂದಾಗ ಇಷ್ಟ ಇದ್ದಿ. ಈಗ ನೋಡ ನನಗ್ಗಿಂತ ಎತ್ತರ ಬೆಳೆದಿ…! ಹೌದ ರೀ ಸರ್ ಮೇಡಮ್. ಎಲ್ಲ ನೀವು ಕಲಿಸಿದ ಪಾಠ. ಬಹಳ ಜನ ಸಹಪಾಠಿಗಳು ಇವತ್ತ ಭೇಟಿ ಆಗ್ಯಾರಿ. ಆ ದಿನಗಳನ್ನ ಮರಿತಿಲ್ಲರೀ…!!!
ಇಲ್ಲಿನ ಬಿವಿವಿ ಸಂಘದ ಬಸವೇಶ್ವರ ಪೂರ್ವ ಪ್ರಾಥಮಿಕ, ಮಾಧ್ಯಮಿಕ ಹಾಗೂ ನೂತನ ಪ್ರೌಢಶಾಲೆಯ ೧೯೯೨-೨೦೦೪ ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಕಂಡು ದೃಶ್ಯಗಳಿವು. ಹಳೇ ವಿದ್ಯಾರ್ಥಿಗಳ ಕಂಡು ಶಿಕ್ಷಕರು ಸಂತಸಪಟ್ಟರೇ, ಅಕ್ಷರ ಕಲಿಸಿದ ಗುರುಗಳ ದರ್ಶನ ಪಡೆದು ಶಿಷ್ಯರು ಆಶೀರ್ವಾದ ಪಡೆದರು. ಎರಡು ದಶಕಗಳ ಬಳಕ ತಮ್ಮ ಸಹಪಾಠಿಗಳ ಭೇಟಿಯಾದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಪರಸ್ಪರ ಅಪ್ಪಿಕೊಂಡು ಭಾವುಕರಾದರು.
ಕಾರ್ಯಕ್ರಮ ಉದ್ಘಾಟಿಸಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಿವಿವಿ ಸಂಘವು ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ನಾನು ಅಽಕಾರ ವಹಿಸಿಕೊಂಡ ಎರಡು ವರ್ಷಕ್ಕೆ ತಾವು ನಮ್ಮ ಸಂಸ್ಥೆಯ ಶಾಲೆಗೆ ಪ್ರವೇಶ ಪಡೆದು ಇಂದು ವಿವಿಧ ಸ್ಥಾನ ಅಲಂಕರಿಸಿದ್ದೀರಿ. ಸಂಘಕ್ಕೂ ಹೆಮ್ಮೆ ಎನಿಸುತ್ತದೆ. ಕಲಿತ ಶಾಲೆ, ಪಾಠ ಹೇಳಿದ ಗುರುಗಳು ಬದುಕಿನಲ್ಲಿ ಅನೇಕ ಬದಲಾವಣೆಗೆ ಕಾರಣರಾಗುತ್ತಾರೆ. ಬಿವಿವಿ ಸಂಘದ ಹಳೇ ವಿದ್ಯಾರ್ಥಿಗಳಿಂದ ಏನನ್ನು ಬಯಸುವದಿಲ್ಲ. ಆಗಾಗ್ಗೆ ಶಾಲೆಗೆ ಭೇಟಿ ನೀಡಿ ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ ಮಾತನಾಡಿ, ಬಿವಿವಿ ಸಂಘವು ಶಿಕ್ಷಣ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಇಲ್ಲಿತ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿ ನಮ್ಮ ಶಾಲಾ ಕಾರ್ಯಕ್ರಮಗಳಿಗೆ ಅತಿಥಿ ಸತ್ಕಾರ ಪಡೆದುಕೊಂಡರೇ ಅದಕ್ಕಿಂತ ದೊಡ್ಡ ಸಾಧನೆ ಏನಿಲ್ಲ. ತಾವೆಲ್ಲ ಆಗಮಿಸಿದ್ದು ಖುಷಿ ಸಂಗತಿ. ಹಳೇ ದಿನಗಳನ್ನು ಮೇಲಕು ಹಾಕುತ್ತಿರುವುದು ಅಪೂರ್ವ ಕ್ಷಣ ಎಂದು ಬಣ್ಣಿಸಿದರು.
ಡಿ.ಬಿ.ಅಯ್ಯನಗೌಡರ ಮಾತನಾಡಿ, ಶಾಲೆಗೆ ಆಗಮಿಸಿದಾಗ ಬಹಳ ಚಿಕ್ಕವರು. ತಪ್ಪು ತಿದ್ದಿ ಹೇಳುವಾಗ ಗದರಿದ್ದೇವೆ. ನಿಮ್ಮಗಳ ತುಂಟಾಟ, ಮೊಂಡಾಟ ನೋಡಿ ನಕ್ಕಿದ್ದೇವೆ. ಸಮಾಜದಲ್ಲಿ ಉನ್ನತ ಸ್ಥಾನ ಪಡೆದು ನಮ್ಮೆದುರಿಗೆ ನಿಂತಿದ್ದೀರಿ. ಇದಕ್ಕಿಂತ ಶಿಕ್ಷಕರಿಗೆ ಬೇರೆ ಖುಷಿ ಇಲ್ಲ. ಶಾಲೆಯ ದಿನಗಳನ್ನು ನೆನಪಿಸಿಕೊಳ್ಳುವುದರ ಜೊತೆಗೆ ಆಗಾಗ್ಗೇ ಭೇಟಿ ನೀಡಬೇಕು. ಗುರುಗಳನ್ನು ಗೌರವಿಸಿದ್ದು ನಮ್ಮ ಪರಂಪರೆಗೆ ಹಿಡಿದ ಕೈಗನ್ನಡಿ ಎಂದರು.

ಶಾಲೆಯ ವಿಶ್ರಾಂತ ಮುಖ್ಯಾಧ್ಯಾಪಕಿಯರಾದ ಡಿ.ಬಿ.ಅಯ್ಯನಗೌಡರ, ಪಿ.ಎಸ್.ಮೇಲ್ನಾಡ, ಮುಖ್ಯಾಧ್ಯಾಪಕಿ ಪಿ.ಎಚ್.ಕುರ್ತಕೋಟಿ, ಬಸವೇಶ್ವರ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಆರ್.ವಿ.ಜೋಶಿ, ಶಿಕ್ಷಕರಾದ ಆರ್.ಎನ್.ಜೋಶಿ, ಎಸ್.ಜಿ.ಹಿರೇಮಠ, ರೇವಣ್ಣ ಬೆಣ್ಣೂರ, ವಿ.ಆರ್.ಕೋರೆ, ಎಂ.ಆರ್.ಕೋರೆ, ಬಿ.ಆರ್.ಮಠಪತಿ, ವಿ.ಎಸ್.ಗಂಗಲ್ ಸೇರಿದಂತೆ ಇತರರು ಇದ್ದರು.

ಬಾಕ್ಸ್..
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ, ಈಗಿನ ಶಿಕ್ಷಕರಿಗೆ ಹಾಗೂ ಶಿಕ್ಷೇತರ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಳೇ ವಿದ್ಯಾರ್ಥಿಗಳು ಬೆಳಗ್ಗೆ ಪ್ರಾರ್ಥನೆ, ನಾಡಗೀತೆ, ರಾಷ್ಟ್ರಗೀತೆ ಹಾಡಿ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು. ಅಲ್ಲದೆ ಶಿಕ್ಷಕರು, ವಿದ್ಯಾರ್ಥಿಗಳು ವಿವಿಧ ಗೀತೆಗಳಿಗೆ ಸಾಮೂಹಿಕ ನೃತ್ಯ ಮಾಡಿ ಸಂತಸ ಪಟ್ಟರು. ತಮ್ಮ ತರಗತಿಗಳಿಗೆ ತೆರಳಿ ತಾವು ಕೂಡುತ್ತಿದ್ದ ಬೆಂಚ್‌ಮೇಲೆ ಕುಳಿತು ಮಧುರ ನೆನಪುಗಳನ್ನು ಮೇಲಕು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net