

ಸಿಂಧನೂರು: ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ನೋಂದಣಿಯಾದ ಎಲ್ಲ ರೈತರ ಜೋಳವನ್ನು ಸರ್ಕಾರ ಖರೀದಿಸಬೇಕು ಎಂದು ಒತ್ತಾಯಿಸಿ ಶಾಸಕ ಹಂಪನಗೌಡ ಬಾದರ್ಲಿ ಅವರು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಆಹಾರ ಸಚಿವ ಕೆ.ಎಚ್.ಮುನಿಯಪ ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ಗೆ ಶುಕ್ರವಾರ ಪತ್ರ ಬರೆದು ಮನವಿ ಮಾಡಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಬೆಳೆದ ಜೋಳವನ್ನು ಈಗಾಗಲೇ 10 ಲಕ್ಷ ಕ್ವಿಂಟಾಲ್ ಮಾತ್ರ ಖರೀದಿಸಲಾಗಿದೆ. ಇನ್ನೂ 3.60 ಲಕ್ಷ ಕ್ವಿಂಟಾಲ್ ಬಾಕಿ ಉಳಿದಿದ್ದು, ಸಂಪೂರ್ಣವಾಗಿ ಖರೀದಿಸಬೇಕು. ಹಿಂಗಾರು ಹಂಗಾಮಿನ ಜೋಳವನ್ನು ರಾಜ್ಯ ಉಗ್ರಾಣ ನಿಗಮ ಖರೀದಿಸಲು ವ್ಯವಸ್ಥೆ ಮಾಡಬೇಕು. ಕೇಂದ್ರ ಉಗ್ರಾಣ ನಿಗಮ ಅಧಿಕಾರಿಗಳು ಜೋಳದಲ್ಲಿ ನುಸಿ, ಹುಳು ಇದೆ ಎಂದು ಖರೀದಿ ನಿರಾಕರಿಸಿದ್ದಾರೆ. ಈಗ ಹವಾಮಾನ ಬದಲಾಗಿದ್ದು, ನುಸಿ, ಹುಳು ಸೇರಿರುವ ಸಾಧ್ಯತೆ ಇದೆ. ಇದರಿಂದ ಸಿಂಧನೂರಿನಲ್ಲಿ ರೈತರು ಧರಣಿ ಕುಳಿತಿದ್ದಾರೆ. ಆದರೆ, ಕೃಷಿ ವಿವಿ ಸಂಶೋಧಕರು ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಎಲ್ಲ ರೈತರ ಜೋಳ ಸರ್ಕಾರ ಖರೀದಿಸಲಿ ಬಂದಿರುವ ಹುಳಗಳಿಂದ ಶೇ.1 ಮಾತ್ರ ಹಾನಿಯಾಗಬಹು ಎಂದುವರದಿ ನೀಡಿದ್ದಾರೆ. ಆದರೆ, ಕೇಂದ್ರ ಉಗ್ರಾಣ ನಿಗಮದ ಅಧಿಕಾರಿಗಳು ಬಹಳಷ್ಟು ಜೋಳ ಹಾನಿಯಾಗಿದೆ ಎಂದು ಹೇಳಿ ಖರೀದಿಗೆ ನಿರಾಕರಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರವೇ ರಾಜ್ಯ ಉಗ್ರಾಣ ನಿಗಮದಿಂದ ಖರೀದಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಕೇಂದ್ರ ಉಗ್ರಾಣ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಖರೀದಿ ಪ್ರಕ್ರಿಯೆಯ ನಿಯಮಗಳನ್ನು ಸಡಿಲಗೊಳಿಸುವಂತೆ ಹೇಳಬೇಕು ಎಂದು ಶಾಸಕ ಬಾದರ್ಲಿ ಕೋರಿದ್ದಾರೆ.