ಜೋಳ ಖರೀದಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

RAICHUR
RAICHUR
Published on

ಸಿಂಧನೂರು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಜೋಳ ಖರೀದಿಯಲ್ಲಿನ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಜೋಳದ ಬೆಳೆಗಾರರು ಗುರುವಾರ ನಗರದ ತಹಸೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜೋಳ ತುಂಬಿದ್ದ ಲಾರಿ ಸಮೇತ ತಹಸೀಲ್ದಾರ ಕಚೇರಿಗೆ ಬಂದಿದ್ದ ರೈತರು, ಲಾರಿಯನ್ನು ಮುಖ್ಯದ್ವಾರದಲ್ಲಿಯೇ ನಿಲ್ಲಿಸಿ ಪ್ರತಿಭಟನೆಗೆ ಮುಂದಾದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಅಮೀನಪಾಷಾ ದಿದ್ದಗಿ ಮುಂಗಾರು ಹಂಗಾಮಿನಲ್ಲಿ ನಿಗಧಿಯಂತೆ ಜೋಳ ಖರೀದಿ ಮಾಡದೆ, ಏಕಾಏಕಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಖರೀದಿ ಕೇಂದ್ರದ ಮುಂದೆಯೇ ಜೋಳವನ್ನು ಇಟ್ಟುಕೊಂಡು ಕೂರುವಂತಾಗಿದೆ.

ಸರಕಾರ ನೊಂದಣಿ ಮಾಡಿಕೊಂಡಿರುವಂತೆ ಜೋಳವನ್ನು ಖರೀದಿಸಬೇಕು. ಈ ರೀತಿಯಾಗಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿದರೆ ರೈತರು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಸಮಸ್ಯೆ ಪರಿಹಾರ ಆಗುವವರೆಗೆ ಇಲ್ಲಿಂದ ಎದ್ದು ಹೋಗುವುದಿಲ್ಲ. ಸರಕಾರದ ನಿರ್ಲಕ್ಷವನ್ನು ಸಹಿಸುವುದಿಲ್ಲ. ಮಳೆಯಿಂದ ಜೋಳ ಹಾಳಾಗುತ್ತಿದೆ. ಗೋದಾಮು ವ್ಯವಸ್ಥಾಪಕರನ್ನು ಸ್ಥಳಕ್ಕೆ ಕರೆಯಿಸಿ, ರೈತರಿಗೆ ಸಮಸ್ಯೆ ಮಾಡದಂತೆ ತಾಕೀತು ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಕೆ.ಕರಿಯಪ್ಪ ಹೋರಾಟದಲ್ಲಿ ಭಾಗವಹಿಸಿ ಸರಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು. ಕೂಡಲೇ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸಿ, ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚನ್ನಬಸವ, ಮುಖಂಡರಾದ ಬಸವರಾಜ ಬನ್ನಿಗನೂರು, ಸಿ.ಬಿ.ಪಾಟೀಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net