ಕಸಾಪದಿಂದ ಅರ್ಹರ ಕಡೆಗಣನೆ

FotoJet
Published on

ಕರುನಾಡು ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಫಯಾಜ್ ಆರೋಪ ಬೈಲಾ ನಿಯಮ ಮೀರಿ ಆಯ್ಕೆ

ಗುಡಿಬಂಡೆ: ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡದ ವ್ಯಕ್ತಿಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಅರ್ಹ ಸಾಹಿತಿ, ಕವಿಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಕರುನಾಡು ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಗುಡಿಬಂಡೆ ಫಯಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕವನ, ಕಥೆ, ಲೇಖನ, ಕಾದಂಬರಿ, ಹಾಡು, ಜಾನಪದ ಸೇರಿ ಇತ್ಯಾದಿ ಬರಹಗಳಿಂದ ತಿದ್ದಿ ತೀಡುತ್ತಾ ಸುಶಿಕ್ಷಿತ ಸಮಾಜ ಕಟ್ಟುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ನೈಜ ಸಾಹಿತಿಗಳಿಗೆ ನೋವು ತರುತ್ತಿದೆ. ಸಾಹಿತ್ಯದ ಗಂಧವರಿಯದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಸೂಕ್ತವಲ್ಲ. ಕವಿಗಳಲ್ಲದ, ಬರಹಗಾರರಲ್ಲದ, ಲೇಖಕರಲ್ಲದ, ಕಾದಂಬರಿಕಾರರಲ್ಲದ, ವಿಮರ್ಶಕರಲ್ಲದ, ವಾಗ್ಮಿಗಳಲ್ಲದವರನ್ನು ಆಯ್ಕೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಸಾಹಿತ್ಯ ಮತ್ತು ಸಾಹಿತಿಗಳಿಗೆ ಮಾತ್ರ ಇರುವ ಕಸಾಪ ಸಾಹಿತ್ಯೇತರರನ್ನು ಗುರ್ತಿಸುವುದು ಉತ್ತಮವಲ್ಲ. ಆಯ್ಕೆ ಸಮಿತಿ ಪ್ರಭಾವಕ್ಕೆ ಮತ್ತು ಆಮಿಷಗಳಿಗೆ ಬಾಗುವುದು ಏಕೆ? ಅಧ್ಯಕ್ಷತೆ ಅಥವಾ ಸನ್ಮಾನಕ್ಕೆ ಅದರದೇ ಆದ ಮಾನದಂಡಗಳಿರುತ್ತವೆ. ಅವೆಲ್ಲವುಗಳನ್ನು ಗಾಳಿಗೆ ತೂರಿ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಹತ್ತಾರು ವರ್ಷಗಳ ಕಾಲ ಸಾಹಿತಿ, ಕವಿ, ಬರಹಗಾರರಾಗಿ ಗುರುತಿಸಿಕೊಂಡವರನ್ನು ಕಸಾಪ ಅಧ್ಯಕ್ಷರು ಮೂಲೆ ಗುಂಪು ಮಾಡಿ ಅವಮಾನ ಮಾಡುತ್ತಿದ್ದಾರೆ. ಕಸಾಪ ಬೈಲಾ ಪ್ರಕಾರ ಸರ್ಕಾರಿ ಅಧಿಕಾರಿಗಳನ್ನು ಪರಿಷತ್ ಅಧ್ಯಕ್ಷರನ್ನಾಗಲೀ ಅಥವಾ ಸಮ್ಮೇಳನದ ಅಧ್ಯಕ್ಷರನ್ನಾಗಲೀ ಮಾಡುವಂತಿಲ್ಲ. ಆದರೆ, ಬೈಲಾ ನಿಯಮಗಳನ್ನು ಗಾಳಿಗೆ ತೂರಿ ರಾಜಕೀಯ ಮಾಡಿ, ಅವರಿಗೆ ಇಷ್ಟ ಬಂದಂತೆ ಆಯ್ಕೆ ಮಾಡುತ್ತಿದ್ದಾರೆ ಎಂದರು.

ಕಸಾಪ ಇರುವುದು ಕವಿ, ಸಾಹಿತಿಗಳನ್ನು ಗುರುತಿಸಲು ಮಾತ್ರ. ಈಗ ಅದು ಸಹ ಅವರನ್ನು ಕಡೆಗಣಿಸುತ್ತಿದೆ. ಈ ಬಗ್ಗೆ ಕಸಾಪ ಜಿಲ್ಲಾಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷರಿಗೂ ದೂರು ನೀಡುತ್ತಿದ್ದೇನೆ ಎಂದ ಅವರು, ಮುಂದಿನ ದಿನಗಳನ್ನು ಕರುನಾಡು ಸಾಹಿತ್ಯ ಪರಿಷತ್ತಿನಿಂದ ಅರ್ಹ ಕವಿ, ಸಾಹಿತಿಗಳು, ಬರಹಗಾರರು ಹಾಗೂ ಲೇಖಕರನ್ನು ಗುರುತಿಸಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ಸದಾಶಿವಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net